ಮಂಗಳೂರು: ಎಂಟು ದಿನಗಳ ಅನಿಶ್ಚಿತತೆ ಮತ್ತು ಗೊಂದಲದ ಬಳಿಕ, ಕೊನೆಗೂ ರಾಹುಲ್ ಗಾಂಧಿ ಮುನ್ನಡೆಸುವ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಇಂಫಾಲ್‌ನಿಂದ ಪ್ರಾರಂಭಿಸಲು ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಅನುಮತಿ ನೀಡಿದೆ.
ಇಂಫಾಲ್ ಪೂರ್ವ ಜಿಲ್ಲೆಯ ಸಾರ್ವಜನಿಕ ಮೈದಾನದಲ್ಲಿ ಸೀಮಿತ ಸಂಖ್ಯೆಯ ಜನರೊಂದಿಗೆ ಧ್ವಜಾರೋಹಣದ ಮೂಲಕ ಯಾತ್ರೆಗೆ ಚಾಲನೆ ನೀಡಲು ಸರ್ಕಾರ ಅನುಮತಿ ನೀಡಿದೆ. ಜನವರಿ 14ರಂದು ರಾಹುಲ್ ಗಾಂಧಿಯ ಯಾತ್ರೆ ಪ್ರಾರಂಭಗೊಳ್ಳಲಿದೆ. “ನಾವು ಯಾತ್ರೆ ಉದ್ಘಾಟನೆಗೆ ಅನುಮತಿ ಕೋರಲು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ನಿವಾಸಕ್ಕೆ ತೆರಳಿದ್ದೆವು. ಆದರೆ, ಅವರು ಅನುಮತಿ ನೀಡಲು ನಿರಾಕರಿಸಿದ್ದಾರೆ” ಎಂದು ಬುಧವಾರ ಕಾಂಗ್ರೆಸ್ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬೆನ್ನಲ್ಲೇ ಇಂಫಾಲ್ ಜಿಲ್ಲಾಡಳಿತ ಶರತ್ತುಬದ್ಧ ಅನುಮತಿ ನೀಡಿದೆ. ಅನುಮತಿ ದೊರೆಯುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೇಶಾಮ್ ಮೇಗಾಚಂದ್ರ, “ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನ ಸಾರ್ವಜನಿಕ ಮೈದಾನದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಉದ್ಘಾಟನೆಗೆ ಅನುಮತಿ ಕೋರಿ ನಾವು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆವು. ಅವರು ಅನುಮತಿ ನೀಡಲು ನಿರಾಕರಿಸಿದ್ದಾರೆ” ಎಂದಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಹುಲ್ ಗಾಂಧಿ ಮುಂದಿನ ಭಾನುವಾರ ಬೆಳಿಗ್ಗೆ ಇಂಫಾಲ್‌ಗೆ ತೆರಳಲಿದ್ದಾರೆ. ಸರ್ಕಾರ ಇಂಫಾಲ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಪರ್ಯಾಯ ಸ್ಥಳ ಹುಡುಕುತ್ತಿದ್ದರು. ಈಗ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಅಲ್ಲಿಯೇ ಕಾರ್ಯಕ್ರಮ ನಡೆಯುತ್ತದೆಯೋ, ಇಲ್ಲ ಬೇರೆಡೆಗೆ ಸ್ಥಳಾಂತರವಾಗುತ್ತದೋ ಎಂಬುವುದು ಖಚಿತವಾಗಿಲ್ಲ.