ರಾಜ್ಯದಲ್ಲಿ 49 ಸಾವಿರ ಅಪ್ರಾಪ್ತ ಗರ್ಭಿಣಿಯರು – ಆತಂಕ ವ್ಯಕ್ತಪಡಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷ – ರೀ ಸರ್ವೆಗೆ ನಿರ್ಧಾರ

ಮಂಗಳೂರು: ರಾಜ್ಯದಲ್ಲಿ ಸುಮಾರು 49 ಸಾವಿರದಷ್ಟು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಈ ಸಂಖ್ಯೆ ಅತ್ಯಂತ ಆತಂಕಾರಿಯಾಗಿದ್ದು, ಮತ್ತೆ ಡಿಎಚ್ಒ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮಟ್ಟದಲ್ಲಿ ರೀ ಸರ್ವೇ ಮಾಡಲಾಗುವುದು. ಪರಿಶೀಲನೆ ಮಾಡುವ ಸಂದರ್ಭ ಅಪ್ರಾಪ್ತ ಗರ್ಭಿಣಿಯರಲ್ಲಿಯೇ ಕೂಲಂಕಷವಾಗಿ ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಲಭ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ. ಇಂತಹ ಪ್ರಕರಣಗಳು ಬಹಳ ಸೂಕ್ಷ್ಮವಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ಹೆಚ್ಚಿನ ಮಟ್ಟದ ಸಾಂತ್ವನದ ಅಗತ್ಯವಿದೆ. ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳನ್ನು ಮುಚ್ಚಿಟ್ಟ ವಿಚಾರದಲ್ಲಿ ಈಗಾಲೇ 6 – 7 ವೈದ್ಯರ ಮೇಲೆಯೇ ಪ್ರಕರಣ ದಾಖಲಾಗಿದೆ. ಅಲ್ಲದೆ ಒಂದೆರಡು ನರ್ಸಿಂಗ್ ಹೋಮ್ ಗಳನ್ನು ಮುಚ್ಚಲಾಗಿದೆ ಎಂದರು. ಆದ್ದರಿಂದ ಮಕ್ಕಳಿಗೆ 18ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಡಿಡಿಪಿಐ ಹಾಗೂ ಬಿಇಒ ಅವರುಗಳು ಮಕ್ಕಳು 18ವರ್ಷಗಳವರೆಗೆ ಶಾಲೆ – ಕಾಲೇಜು ತೊರೆಯದಂತೆ ಗಮನಹರಿಸಬೇಕು. ಪರಿಣಾಮ 90 ಪ್ರತಿಶತ ಬಾಲ್ಯ ಕಾರ್ಮಿಕ, ಬಾಲ್ಯ ವಿವಾಹವನ್ನು ತಪ್ಪಿಸಿದಂತಾಗುತ್ತದೆ ಎಂದು ನಾಗಣ್ಣ ಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here