ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಅಟಲ್ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ನ್ನು ವಾಹನ ಸವಾರರು ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತಿಸಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿದೆ.
ಜನರು ಫೋಟೋ ತೆಗೆಸಿಕೊಳ್ಳುವುದಕ್ಕಾಗಿಯೇ ಸೇತುವೆಯ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು, ಸೆಲ್ಫಿಗಾಗಿ ಕೆಲವರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಜನರು ಎಲ್ಲೆಂದರಲ್ಲಿ ಕಸ ಹಾಕಿರುವುದು, ರೇಲಿಂಗ್ಸ್‌ಗಳನ್ನು ಹತ್ತುವುದು, ವೀಕ್ಷಣಾ ಗೋಪುರ ತಲುಪಲು ದಂಪತಿಗಳು ಸೇತುವೆಯ ಏಣಿಯನ್ನು ದಾಟುತ್ತಿರುವ ವಿಡಿಯೋಗಳು ವೈರಲ್ ಆಗಿದೆ.
ಈ ಬಗ್ಗೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದು, ಅಟಲ್ ಸೇತು ಮೇಲೆ ವಾಹನ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮದ ಸೂಚನೆ ನೀಡಿದ್ದಾರೆ. ಅಟಲ್ ಸೇತು ವೀಕ್ಷಿಸಲು ಯೋಗ್ಯವಾಗಿದ್ದರೂ, ಫೋಟೋಗಳಿಗಾಗಿ ವಾಹನ ನಿಲ್ಲಿಸುವುದು ಕಾನೂನು ಬಾಹಿರವಾಗಿದೆ. ಹಾಗೆ ಮಾಡುವ ವ್ಯಕ್ತಿಗಳ ವಿರುದ್ದ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ. ‘ಅಟಲ್ ಸೇತು ಖಂಡಿತವಾಗಿಯೂ ವೀಕ್ಷಣೆಗೆ ಯೋಗ್ಯವಾಗಿದೆ. ಆದರೆ, ಅದಕ್ಕಾಗಿ ವಾಹನ ನಿಲ್ಲಿಸುವುದು ಮತ್ತು ಫೋಟೋಗಳನ್ನು ಕ್ಲಿಕ್ ಮಾಡುವುದು ಕಾನೂನುಬಾಹಿರವಾಗಿದೆ. ನೀವು ಎಂಟಿಎಚ್ಎಲ್ ನಲ್ಲಿ ವಾಹನ ನಿಲ್ಲಿಸಿದರೆ ಎಫ್ಐಆರ್ ಅನ್ನು ಎದುರಿಸಬೇಕಾಗುತ್ತದೆ’ ಎಂದು ಮುಂಬೈ ಟ್ರಾಫಿಕ್ ಪೊಲೀಸರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.