ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 10ನೇ ಚೀತಾ ಸಾವು-2022ರಲ್ಲಿ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾ

ಮಂಗಳೂರು(ಭೋಪಾಲ್): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜ.16ರಂದು ನಮೀಬಿಯದಿಂದ ತರಲಾಗಿದ್ದ ಶೌರ್ಯ ಹೆಸರಿನ ಚೀತಾ ಸಾವನ್ನಪ್ಪಿದೆ. ಇದರೊಂದಿಗೆ 2022ರಲ್ಲಿ ಭಾರತಕ್ಕೆ ತರಿಸಲ್ಪಟ್ಟ ಚೀತಾಗಳ ಪೈಕಿ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 10ಕ್ಕೇರಿದೆ. ಚೀತಾ ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಲಿದೆ.

ಸಾಂದರ್ಭಿಕ ಚಿತ್ರ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ ಏಳು ವಯಸ್ಕ ಹಾಗೂ ಮೂರು ಮರಿ ಚೀತಾಗಳು ಸಾವನ್ನಪ್ಪಿವೆ. ಶೌರ್ಯ ಚಿರತೆಯು ನಿಶ್ಶಕ್ತಿಯಿಂದ ಸಂಚರಿಸುತ್ತಿದ್ದುದನ್ನು ಗಮನಿಸಿದ ಟ್ರ್ಯಾಕಿಂಗ್ ತಂಡವು, ಅದಕ್ಕೆ ಅರಿವಳಿಕೆ ಬರಿಸುವ ಚುಚ್ಚುಮದ್ದನ್ನು ನೀಡಿ ಶುಶ್ರೂಷೆ ನಡೆಸಿತೆಂದು ಲಯನ್ ಪ್ರಾಜೆಕ್ಟ್‌ನ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಹೇಳಿಕೆ ತಿಳಿಸಿದೆ. ಶುಶ್ರೂಷೆಯ ಬಳಿಕ ಚೀತಾವು ಚೇತರಿಸಿಕೊಂಡಿತಾದರೂ, ಸಿಪಿಆರ್ ಚಿಕಿತ್ಸೆಗೆ ಸ್ಪಂದಿಸಲು ಚೀತಾ ವಿಫಲವಾಗಿ ಮೃತಪಟ್ಟಿತೆಂದು ಹೇಳಿಕೆ ತಿಳಿಸಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ವರ್ಷದ ಆಗಸ್ಟ್ 2ರಂದು 9ನೇ ಚೀತಾವು ಸಾವನ್ನಪ್ಪಿತ್ತು. ಭಾರತೀಯ ಚೀತಾವು 1952ರಲ್ಲಿ ಸಂಪೂರ್ಣವಾಗಿ ಅಳಿದುಹೋಗಿರುವುದಾಗಿ ಘೋಷಿಸಲಾಗಿತ್ತು. ಭಾರತದಲ್ಲಿ ಅವುಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ಸುಮಾರು 20 ವಯಸ್ಕ ಚೀತಾಗಳನ್ನು 2022ರಲ್ಲಿ ನಮೀಬಿಯಾದಿಂದ ಹಾಗೂ 2023ರಲ್ಲಿ ದಕ್ಷಿಣ ಆಪ್ರಿಕದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು.

LEAVE A REPLY

Please enter your comment!
Please enter your name here