ಮಂಗಳೂರು(ಬೆಂಗಳೂರು): ಕಾಂಗ್ರೆಸ್ ಸರಕಾರ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ. ಶೇಕಡವಾರು 10ರಷ್ಟು ಬದಲು 10 ಯುನಿಟ್ ಫ್ರೀ ವಿದ್ಯುತ್ ನೀಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಮೊದಲು ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಯುನಿಟ್ಗಿಂತ ಶೇ. 10ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ ಶೇಕಡವಾರು ಬದಲಾಗಿ 10 ಯುನಿಟ್ ನೀಡಲು ಸರಕಾರ ತೀರ್ಮಾನಿಸಿದ್ದು, ಈ ಬಗ್ಗೆ ಇಂದು(ಜ.18) ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
4450 ಕೋಟಿ ರೂಪಾಯಿ ಸಾಲಕ್ಕೆ ಸರಕಾರಿ ಖಾತರಿ
ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆಯಿದೆ. ಶ್ಯೂರಿಟಿ ನೀಡಬೇಕೆಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರಕಾರ ಇದೀಗ 4450 ಕೋಟಿ ರೂ. ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ ಎಂದು ಎಚ್ಕೆ ಪಾಟೀಲ್ ಮಾಹಿತಿ ನೀಡಿದರು.
ವಿದ್ಯುತ್ ಸರಬರಾಜು ಕಂಪನಿಗಳು ಯಪಿಸಿಎಲ್ ಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆಯಾಗಿದೆ. ಹಾಗೇ ಸೆಂಟ್ರಲ್ ಇಆರ್.ಸಿಯವರ ಆದೇಶದ ಕುರಿತು ಚರ್ಚೆಯಾಗಿದ್ದು, ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ ಮತ್ತು 419 ಕೋಟಿ ರೂ. ನೀಡಬೇಕಾಗಿದೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.