ಮಂಗಳೂರು: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಯುವಕರ ಗುಂಪು ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮತ್ತು ನಂತೂರಿನ ಜಿಎನ್ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜೊತೆಯಾಗಿ ಶುಕ್ರವಾರ ಬೆಳಗ್ಗೆ ಕದ್ರಿ ಪಾರ್ಕಿಗೆ ಆಗಮಿಸಿದ್ದರು. ಬಸ್ಸಿನಲ್ಲಿ ಬರುತ್ತಿರುವಾಗಲೇ ಹಿಂಬಾಲಿಸಿದ್ದ ಇತರ ವಿದ್ಯಾರ್ಥಿಗಳ ತಂಡ ಕದ್ರಿ ಪಾರ್ಕ್ ಬರುತ್ತಲೇ ಅಡ್ಡಗಟ್ಟಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಯುವಕ- ಯುವತಿ ಕೇರಳ ಮೂಲದವರಾಗಿದ್ದು ಮಲೆಯಾಳಂ ಮಾತನಾಡುತ್ತಿದ್ದರು. ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ ಎಂದುಕೊಂಡ ಯುವಕರ ತಂಡ ಪ್ರಶ್ನೆ ಮಾಡಿ, ಇಬ್ಬರ ಮೇಲೂ ಹಲ್ಲೆಗೆ ಮುಂದಾಗಿದ್ದಲ್ಲದೇ ಅವರ ವಿಡಿಯೋ, ಫೋಟೋ ರೆಕಾರ್ಡ್ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಕದ್ರಿ ಪೊಲೀಸರು ಯುವಕ- ಯುವತಿಯನ್ನು ರಕ್ಷಿಸಿ, ಹಲ್ಲೆಗೆ ಮುಂದಾಗಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರು ವಿದ್ಯಾರ್ಥಿಗಳು ಅಪ್ರಾಪ್ತರಾಗಿದ್ದು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.