ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಂಗಳೂರು ನಗರದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲಿ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದ್ದು, 131 ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಕಣ್ಗಾವಲಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಗರದಾದ್ಯಂತ 57 ಸೆಕ್ಟರ್ ಮೊಬೈಲ್ ತಂಡ 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆಯನ್ನು ಮಾಡಲಾಗಿದೆ. 14 ಸ್ಥಳಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ನಿಯೋಜಿಸಲಾಗಿದೆ. 9 ಸಿ.ಎ.ಆರ್ ಮತ್ತು 3 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತುಗಳನ್ನು ಆಯೋಜಿಸಲಾಗಿದೆ. ಮಂಗಳೂರು ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಧ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಅಳವಡಿಸಲಾದ ಕ್ರಮದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ರ್‍ಯಾಲಿಗಳಿಗೆ ಅನುಮತಿ ಇಲ್ಲ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯಾ ಎಸಿಪಿ ಗಳ ಮಾರ್ಗದರ್ಶನದಲ್ಲಿ ಈಗಾಗಲೇ ಶಾಂತಿ ಸಭೆಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದೂ ಪೊಲೀಸ್ ಠಾಣಾ ಮಟ್ಟದಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಏರಿಯಾ ಡಾಮಿನೇಷನ್ ಮತ್ತು ರೂಟ್ ಮಾರ್ಚ್ ಕೈಗೊಳ್ಳಲಾಗಿದೆ.
ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾದಿಸಿ ಫ್ಲೆಕ್ಸ್, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಗಳ ಮೇಲೆ ಸೂಕ್ತ ನಿಗಾ ಇರಿಸಲಾಗಿದೆ. ಮತ್ತು ಆಯೋಜಕರಿಗೆ ಅವುಗಳ ಭದ್ರತೆಯನ್ನು ಖಚಿತಪಡಿಸಲು ಸೂಚಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜನವರಿ 21ರ ಮಧ್ಯರಾತ್ರಿಯಿಂದ ಜನವರಿ 23 ರ ಮುಂಜಾನೆಯ ವರೆಗೆ ಎಲ್ಲಾ ರೀತಿಯ ಬಾರ್ ಗಳು ಮತ್ತು ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಗಳೂರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 3 ಡಿಸಿಪಿ, 6 ಎಸಿಪಿ, 11 ಪಿ.ಐ ಮತ್ತು 37 ಪಿ.ಎಸ್.ಐ ದರ್ಜೆಯ ಅಧಿಕಾರಿಗಳನ್ನು ಹಾಗೂ 781 ಪೊಲೀಸ್ ಸಿಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.