ರಾಜ್ಯದ ಅಂತಿಮ ಮತದಾರರ ಪಟ್ಟಿ 2024 – 17 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪ್ರಾಬಲ್ಯ

ಮಂಗಳೂರು(ಬೆಂಗಳೂರು): ರಾಜ್ಯ ಮತದಾರರ ಅಂತಿಮ‌ ಪಟ್ಟಿ-2024 ಪ್ರಕಟವಾಗಿದ್ದು, ಅಂತಿಮ‌ ಪಟ್ಟಿಯಲ್ಲಿ 5,37,85,815 ಮತದಾರರಿದ್ದಾರೆ. ಈ ಪೈಕಿ 2,68,02,838 ಪುರುಷ ಮತದಾರರು, 2,65,69,428 ಮಹಿಳಾ ಮತದಾರರು ಮತ್ತು 4,896 ಇತರ ಮತದಾರರು ಸೇರಿದ್ದಾರೆ.

ಕರಡು ಪಟ್ಟಿಗೆ ಹೋಲಿಸಿದರೆ ಒಟ್ಟು ಮತದಾರರಲ್ಲಿ 4,08,653 ಮತದಾರರು ಹೆಚ್ಚಾಗಿದ್ದಾರೆ. ಈ ಪೈಕಿ ಮಹಿಳಾ ಮತದಾರರಲ್ಲಿ ಗಮನಾರ್ಹವಾಗಿ 2,77,717 ರಷ್ಟು ಮತದಾರರು ಸಂಖ್ಯೆ ಹೆಚ್ಚಳವಾಗಿದ್ದು, ಪುರುಷ ಮತದಾರರಲ್ಲಿ 1,30,912 ಮತ್ತು ಇತರ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ 7,17,201 ಮತದಾರರನ್ನು ಹೊಂದಿದೆ. ವ್ಯತಿರಿಕ್ತವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 1,67,556 ಮತದಾರರಿದ್ದಾರೆ.

100ಕ್ಕೆ 100ರಷ್ಟು ಸಾಧನೆ:
”ಭಾವಚಿತ್ರ ಅಳವಡಿಕೆ ಹಾಗೂ ಮತದಾರರ ಗುರುತಿನ ಚೀಟಿಗಳ ಹಂಚಿಕೆಯನ್ನು ಶೇಕಡಾ ನೂರಕ್ಕೆ ನೂರರಷ್ಟು ಸಾಧಿಸಲಾಗಿದೆ. ಮತದಾರರ ಗುರುತಿನ ಚೀಟಿಗಳನ್ನು ಮತದಾರರಿಗೆ ತ್ವರಿತ ಅಂಚೆ ಸೇವೆಯ ಮೂಲಕ ಆಯಾ ವಿಳಾಸಗಳಿಗೆ ರವಾನಿಸಲಾಗುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ 17,47,518 ಮತದಾರರ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ತ್ವರಿತ ಅಂಚೆ ಮೂಲಕ ನೇರವಾಗಿ ಮತದಾರರಿಗೆ ತಲುಪಿಸಲಾಗಿದೆ. ಹೆಚ್ಚುವರಿಯಾಗಿ, ಇನ್ನೂ 10,76,506 ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿದ್ದು, ಪ್ರಸ್ತುತ ಮತದಾರರಿಗೆ ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಒಟ್ಟು ಜನಸಂಖ್ಯೆಯಲ್ಲಿ 69.74% ಮತದಾರರಾಗಿದ್ದಾರೆ” ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ಅಂತಿಮ ಮತದಾರರ ಪಟ್ಟಿ -2024 ರ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ 845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. ಅದರಂತೆ 552 ಮತಗಟ್ಟೆಗಳ ಹೆಚ್ಚಳವಾಗಿದೆ’ ಎಂದರು.‌ ಬದಲಾವಣೆಗೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ತಿದ್ದುಪಡಿ ಮಾಡಲು ಅವಕಾಶ ಇದೆ ಇಂದಿನಿಂದ ಚುನಾವಣೆ ನಾಮಪತ್ರ ಸಲ್ಲಿಕೆಯ 10 ದಿನಗಳ ಮುಂಚಿನ ವರೆಗೆ ಹೆಸರು ನೋಂದಣಿ ಮಾಡಬಹುದು. ಮತದಾರರು ವಿಳಂಬವಿಲ್ಲದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಸೂಚಿಸಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್ ನಲ್ಲಿ ವೋಟರ್ ಹೆಲ್ಫ್​​ ಲೈನ್ ಅಪ್ಲಿಕೇಶನ್ ಆಯ್ಕೆಯನ್ನು ಹೊಂದಿದ್ದಾರೆ. ಪರ್ಯಾಯವಾಗಿ, https://voterportal.eci.gov.in/ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆ 6,45,491 ಇತ್ತು. ಅಂತಿಮ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ 10,34,018ರಷ್ಟು ಹೆಚ್ಚಳವಾಗಿದೆ. ಒಟ್ಟು 3,88,527 ರಷ್ಟು ಯುವ ಮತದಾರರ ಸಂಖ್ಯೆ ಹೆಚ್ಚಾಗಿದೆ.‌ ಅಂತಿಮ ಮತದಾರರ ಪಟ್ಟಿಯಲ್ಲಿ 100+ ಮತದಾರರ ಸಂಖ್ಯೆ 17,937 ಇದೆ. 80 ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 12,71,862 ಇದೆ. ಸಾಗರೋತ್ತರ ಮತದಾರರ ಸಂಖ್ಯೆ 3,165 ಇದೆ.  17 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. 113 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ. ಪ್ರತಿ 1000 ಮತದಾರರ ಲಿಂಗಾನುಪಾತದಲ್ಲಿ 997 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಸುಮಾರು 31 ಲಕ್ಷ ಮತದಾರರೊಂದಿಗೆ ದೊಡ್ಡ ಕ್ಷೇತ್ರವಾಗಿದ್ದರೆ, ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ 15.65 ಲಕ್ಷ ಅತಿ ಕಡಿಮೆ ಮತದಾರರು ಇದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಮತದಾರರ ಅಂತಿಮ‌ ಪಟ್ಟಿ ಹೈಲೈಟ್ಸ್:

ಒಟ್ಟು ಮತದಾರರು-5,37,85,815
ಪುರುಷರು-2,69,33,750
ಮಹಿಳೆಯರು- 2,68,47,145
ಇತರ-4,920
ಸೇವಾ ಮತದಾರರು – 46,501
ಯುವ ಮತದಾರರು -3,88,527
ವಿದೇಶದಲ್ಲಿರುವ ಮತದಾರರು -3,164
80 ವರ್ಷ ದಾಟಿರುವ ಮತದಾರರು – 12,71,862
ಶತಾಯುಷಿ ಮತದಾರರು-17,937
ವಿಕಲಚೇತನ ಮತದಾರರು -5,62,890
ಮತದಾನ ಕೇಂದ್ರಗಳು-58,834
ಒಟ್ಟು ಸೇರ್ಪಡೆ,02,328
ತೆಗೆದುಹಾಕುವಿಕೆ- 11,14,257
ಮಾರ್ಪಾಡು-13,43,123

LEAVE A REPLY

Please enter your comment!
Please enter your name here