ಮಂಗಳೂರು(ಹುಣಸೂರು): ಮರಣ ಹೊಂದಿದ್ದ ಸಹೋದರನ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಿ ಶಾಲಾ ಶಿಕ್ಷಕರ ಹುದ್ದೆ ಗಿಟ್ಟಿಸಿ, 26 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ವಜಾಗೊಂಡ ಶಿಕ್ಷಕ ಲಕ್ಷ್ಮಣೇಗೌಡ, ಈತ ತನ್ನ ಸೋದರ ಲೋಕೇಶ್ ಮರಣಿಸಿದ ನಂತರ ತಾನೇ ಲೋಕೇಶ್ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದ.
ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ನಿವಾಸಿ ರಾಮೇಗೌಡರಿಗೆ ಲೋಕೇಶ್ ಮತ್ತು ಲಕ್ಫ್ಮಣೇಗೌಡ ಪುತ್ರರು. ಲೋಕೇಶ್ ಶಿಕ್ಷಕರಾಗಿದ್ದು, 1992 ರಲ್ಲಿ ಮರಣ ಹೊಂದಿದ್ದರು. ನಿರುದ್ಯೋಗಿಯಾಗಿದ್ದ ಲಕ್ಷ್ಮಣೇಗೌಡ 1998 ರಲ್ಲಿ ಅಣ್ಣನ ಹೆಸರಿನ ದಾಖಲೆ ನೀಡಿ ಶಿಕ್ಷಕ ಹುದ್ದೆ ಗಿಟ್ಟಿಸಿಕೊಂಡಿದ್ದ. ಈ ವಿಚಾರ ಲೋಕೇಶ್ ಪತ್ನಿಗೆ ತಿಳಿದು, ಪತಿ ಸಾವನ್ನಪ್ಪಿರುವ ಬಗ್ಗೆ ದಾಖಲೆ ಸಲ್ಲಿಸಿದ್ದರು. ಅಲ್ಲದೆ ಹುಣಸೂರಿನ ಇಂಟಕ್ ರಾಜ್ ಎಂಬುವರು ಶಿಕ್ಷಣ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ದೀರ್ಘ ವಿಚಾರಣೆ ನಡೆದು ಲೋಕೇಶ್ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಲಕ್ಷ್ಮಣೇಗೌಡ ಕೆಲಸ ಗಿಟ್ಟಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈಗ ವಜಾಗೊಳಿಸಲಾಗಿದೆ. ನಕಲಿ ಹೆಸರಿನಲ್ಲಿ ಇಲಾಖೆಗೆ ವಂಚಿಸಿ ಪಡೆದಿರುವ ಎಲ್ಲಾ ಆರ್ಥಿಕ ಸೌಲಭ್ಯವನ್ನು ಲಕ್ಷ್ಮಣೇಗೌಡ ರಿಂದ ವಸೂಲಿ ಮಾಡಲು ಆದೇಶಿಸಲಾಗಿದೆ. ಹಿಂತಿರುಗಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ವಹಿಸಲು ಹುಣಸೂರು ಬಿಇಓ ಗೆ ಸೂಚಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.