ಮಂಗಳೂರು: ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟ್ಟಿಂಗ್ ಶಾಪ್ ನಲ್ಲಿ ಜ.10 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.
ವಿಶೇಷ ಕಾರ್ಯಾಚರಣೆ ನಡೆಸಿದ ಮೂಡಬಿದ್ರೆ ಪೊಲೀಸರು, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಮೂಡಬಿದ್ರೆ ತಾಲೂಕು ಪುಚ್ಚಮೊಗರು ನಿವಾಸಿ ಹರೀಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕಳ್ಳತನಕ್ಕೆ ಉಪಯೋಗಿಸಿದ್ದ ಆಕ್ಟಿವಾ ಸ್ಕೂಟರ್ ಹಾಗೂ 40 ಇಂಚಿನ ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ಕಳ್ಳತನ ಪ್ರಕರಣ, ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 5 ಕಳ್ಳತನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಕಾರ್ಯಚರಣೆಯಲ್ಲಿ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪೊಲೀಸ್ ಉಪ ನಿರೀಕ್ಷಕ ದಿವಾಕರ್ ರೈ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೊಹಮ್ಮದ್ ಹುಸೇನ್, ಆಕಿಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಪಾಲ್ಗೊಂಡಿದ್ದರು.