ಮಂಗಳೂರು(ಬೆಂಗಳೂರು): ವ್ಯಕ್ತಿಯೊಬ್ಬರು ಮಗನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ದಾರುಣ ಘಟನೆ ಬೆಂಗಳೂರಿನಲ್ಲಿ ಜ.25ರ ರಾತ್ರಿ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್ನ ಮನೆಯೊಂದರಲ್ಲಿ ಸುರೇಶ್ ಎಂಬವರು ಮಗ ನರ್ತನ್ ಬೋಪಣ್ಣ (32) ಅವರನ್ನು ಕೊಲೆ ಮಾಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಮನೆಗೆ ತೆರಳಿದ್ದರು. ಈ ವೇಳೆ ನರ್ತನ್ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಎನ್ನಲಾಗಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದ ನರ್ತನ್ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ.
ಘಟನೆಯ ವಿವರ:
ಕೊಡಗು ಮೂಲದವರಾದ ನರ್ತನ್ ಬೋಪಣ್ಣ ಕರೇಕಲ್ನ ಮನೆಯಲ್ಲಿ ತಂದೆ ಸುರೇಶ್ ಮತ್ತು ತಾಯಿ ಜತೆ ವಾಸವಾಗಿದ್ದರು. ನರ್ತನ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ತಂದೆ ಸುರೇಶ್ಗೆ ಕುಡಿತದ ಹುಚ್ಚು ವಿಪರೀತವಾಗಿದ್ದು, ಇದೇ ಕಾರಣದಿಂದ ಅವರು ತಮ್ಮ ಮಗನನ್ನೇ ಕೊಲೆ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮನೆಯಲ್ಲೇ ಇರುತ್ತಿದ್ದ ಸುರೇಶ್ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸದಾ ಕಾಲ ಕುಡಿತದ ಗುಂಗಿನಲ್ಲೇ ಇರುತ್ತಿದ್ದ ಸುರೇಶ್ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದರು.
ಜ.25ರ ಸಂಜೆಯೂ ಕುಡಿತಕ್ಕೆ ಹಣ ಕೇಳಿ ವಿಪರೀತ ಹಿಂಸೆ ನೀಡಿದ್ದರು. ಹೊಡೆಯಲು ಬಂದಿದ್ದರು. ಇದನ್ನೆಲ್ಲ ನೋಡಿದ ನರ್ತನ್ ತನ್ನ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದರು. ಕೋಣೆಯ ಒಳಗಿನಿಂದಲೇ ಸುರೇಶ್ ಬೆದರಿಕೆ ಹಾಕುತ್ತಿದ್ದರು. ಸ್ವಲ್ಪ ಹೊತ್ತು ಕಳೆದರೆ ಸರಿಯಾದೀತು ಎಂದು ನರ್ತನ್ ನಿರೀಕ್ಷೆ, ಅದಕ್ಕೆ ಪೂರಕವಾಗಿ ಸುರೇಶ್ ಒಳಗಿನಿಂದ ಸ್ವಲ್ಪ ತಣ್ಣಗಿದ್ದಂತೆ ಕಂಡುಬಂದಿತ್ತು. ಇತ್ತ ಒಳಗಿನಿಂದ ಸುರೇಶ್ ದೊಡ್ಡದೊಂದು ಕೃತ್ಯಕ್ಕೆ ಸಜ್ಜಾಗುತ್ತಿದ್ದರು. ಮಗ ತನ್ನನ್ನು ಕೋಣೆಯೊಳಗೆ ಕೂಡಿಹಾಕಿದ್ದರಿಂದ ಸಿಟ್ಟಿಗೆದ್ದು, ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಸಿಂಗಲ್ ಬ್ಯಾರಲ್ ಗನ್ ಅನ್ನು ಹೊರಗೆ ತೆಗೆದು ಬಾಗಿಲಿಗೆ ನೇರವಾಗಿ ಗುಂಡು ಹೊಡೆದಿದ್ದಾರೆ. ಹಾರಿಸಿದ ಗುಂಡು ಬಾಗಿಲನ್ನು ಒಡೆದುದಲ್ಲದೆ ನೇರವಾಗಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ಹೊಕ್ಕಿದೆ.
ಮೂರು ಗಂಟೆ ನೆತ್ತರ ಮಡುವಲ್ಲಿ ಬಿದ್ದಿದ್ದ ನರ್ತನ್:
ಗುಂಡು ಕಾಲನ್ನು ಹೊಕ್ಕುತ್ತಿದ್ದಂತೆಯೇ ನರ್ತನ್ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾನೆ. ಸಹೋದರಿ ಸಂಬಂಧಿಕರೊಬ್ಬರನ್ನು ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಅವರು ಮೂರು ಗಂಟೆ ತಡವಾಗಿ ಮನೆಗೆ ತಲುಪಿದ್ದರು. ಅಷ್ಟೂ ಹೊತ್ತು ರಕ್ತ ಬಸಿದುಹೋಗಿ ನಿತ್ರಾಣಗೊಂಡಿದ್ದ ನರ್ತನ್ ಏಳುವ ಸ್ಥಿತಿಯಲ್ಲೇ ಇರಲಿಲ್ಲ. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನರ್ತನ್ ಸಾವನ್ನಪ್ಪಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.