ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿ ಮಾನಭಂಗ-ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಮಂಗಳೂರಿನ ನ್ಯಾಯಾಲಯ-ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ವಾದ ಮಂಡನೆ

ಪುತ್ತೂರು: ಶಿವಮೊಗ್ಗದಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದ ಯುವತಿಯನ್ನು ಮಾನಭಂಗ ಮಾಡಿದ ಆರೋಪಿಗೆ ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 3000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಜನಾರ್ದನ್ ಪುತ್ತೂರು

2021ರ ಜ.12 ರಂದು ಶಿವಮೊಗ್ಗದಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದ ಪದ್ಮಾವತಿ ಎಂಬ ಯುವತಿಗೆ ಆಕೆಯ ಸೀಟಿನ ಪಕ್ಕ ಕುಳಿತ ಆರೋಪಿ ಲೈಂಗಿಕ ಕಿರುಕುಳ ನೀಡಿ ಮಾನಭಂಗ ಮಾಡಿದ ಬಗ್ಗೆ ಯುವತಿ ನೀಡಿದ ದೂರಿನ ಮೇರೆಗೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಆರೋಪಿ ಕಿನ್ನಿಕಂಬಲ ಪಡು ಪೇರಾರದ ಲಿಯಾಖತ್ ಖಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೋಲಿಸ್ ಉಪ ನಿರೀಕ್ಷಕ ರಾಘವೇಂದ್ರ ನಾಯ್ಕ್ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 3000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ 10 ದಿನಗಳ ಸಾದಾ ಜೈಲು ವಾಸ ಅನುಭವಿಸುವಂತೆ ಹಾಗೂ ದಂಡದ ಮೊತ್ತದಲ್ಲಿ 2000 ರೂಪಾಯಿ ನೊಂದ ಯುವತಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿದ್ದಾರೆ. ಪ್ರಸ್ತುತ ಸರಕಾರಿ ಅಭಿಯೋಜಕರಾಗಿರುವ ಮೋಹನ್ ಕುಮಾರ್ ಅವರು ಭಾಗಶಃ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ನಂತರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ವಾದಿಸಿದ್ದರು.

LEAVE A REPLY

Please enter your comment!
Please enter your name here