ಮಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿರುವ 11 ದಿನಗಳ ಉಪವಾಸದ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ನೀಡಿರುವ ಹೇಳಿಕೆಯಿಂದ ರಾಮಭಕ್ತರ ಭಾವನೆಗೆ ನೋವುಂಟಾಗಿದೆ. ಹಾಗಾಗಿ ಮೊಯ್ಲಿ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಡಾ ಎಂ.ಬಿ.ಪುರಾಣಿಕ್ ಒತ್ತಾಯಿಸಿದ್ದಾರೆ.
ಜ.29ರಂದು ವಿಶ್ವಹಿಂದೂ ಪರಿಷತ್‌ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ವ್ರತಾಚರಣೆಯ ಬಗ್ಗೆ ಮೊಯ್ಲಿಯವರು ಲಘುವಾಗಿ ಮಾತನಾಡಿದ್ದಾರೆ. ‘ಮೋದಿಯವರು ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿದ್ದಾರೆ. ಇದರಿಂದ ಆ ಸ್ಥಳ ಅಪವಿತ್ರವಾಗುತ್ತದೆ, ಮಂದಿರ ಲೋಕಾರ್ಪಣೆ ಮತ್ತು ಪ್ರತಿಷ್ಠಾಪನೆಗೆ ಮೋದಿಯವರನ್ನು ಗರ್ಭಗುಡಿಗೆ ಬಿಡಬಾರದಿತ್ತು’ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಬರೆದವರೇ ಈ ರೀತಿ ಹೇಳಿಕೆ ನೀಡಬಾರದಿತ್ತು. ಇದು ಸಮಸ್ತ ಭಾರತೀಯರಿಗೆ ಮಾಡಿದ ಅವಮಾನ. ಮಾತ್ರವಲ್ಲದೆ ಹಿಂದುಳಿದ ವರ್ಗದ ಮೋದಿಯವರ ಜಾತಿಯನ್ನು ನಿಂದಿಸಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಶಿಷ್ಟಾಚಾರ, ವ್ರತದಲ್ಲಿದ್ದವರು ಗರ್ಭಗುಡಿಗೆ ಹೋಗಿ ಪೂಜೆ ಮಾಡಿದರೆ ಅದು ಅಪವಿತ್ರವಾಗುವುದಿಲ್ಲ. ಬ್ರಾಹ್ಮಣರು ಅಥವಾ ಯಾವುದೋ ಒಂದು ನಿರ್ದಿಷ್ಟ ಜಾತಿಯವರು ಮಾತ್ರ ಪೂಜೆ ಮಾಡಬೇಕು ಎಂಬುದಾಗಿ ಹಿಂದೂ ಸಮಾಜ ಬಯಸುವುದಿಲ್ಲ. ರಾಮ, ಕೃಷ್ಣ ದೇವರು ಕೂಡ ಬ್ರಾಹ್ಮಣರಲ್ಲ. ವ್ಯಾಸ ಮಹರ್ಷಿ ಬೆಸ್ತ, ವಾಲ್ಮೀಕಿ ಓರ್ವ ಬೇಟೆಗಾರನಾಗಿದ್ದವರು. ಜನ ಜಾತಿ ನೋಡುವುದಿಲ್ಲ, ಬದಲಾಗಿ ನೀತಿ ಮಾತ್ರ ನೋಡುತ್ತಾರೆ. ಮೊಯ್ಲಿಯವರು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಧರ್ಮವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ವಿಎಚ್‌ಪಿ ಬಲವಾಗಿ ಖಂಡಿಸುತ್ತದೆ. ಅವರು ಕೂಡಲೇ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.