ಪುತ್ತಿಲ ಬಿಜೆಪಿ ಸೇರ್ಪಡೆ-ಅಡೆತಡೆ ನಿವಾರಿಸಲು ಸಭೆ-ಸಿಗದ ಉತ್ತರ, ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

ಮಂಗಳೂರು(ಪುತ್ತೂರು): ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾರ್‌ ಪುತ್ತಿಲ ಇಂದು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಇದನ್ನು ಪುಷ್ಠೀಕರಿಸುವಂತೆ  ನಗರದ ಹೊರವಲಯದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಮತ್ತಿತರರ ತಂಡ ಪುತ್ತೂರಿನ ಕೆಲವು ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಅರುಣ್‌ ಕುಮಾರ್‌ ಪುತ್ತಿಲ ಘರ್‌ ವಾಪ್ಸಿ ಕಾರ್ಯಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದರೂ ಪುತ್ತೂರಿನ ಕೆಲವು ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅಸಮಾಧಾನಿತರೊಂದಿಗೆ ಸಭೆ ನಡೆಸುತ್ತಿರುವ ಮುಖಂಡರು ಕೈಗೊಳ್ಳುವ ತೀರ್ಮಾನದ ಬಳಿಕ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತಂತೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್‌ ಕುಂಪಲ ಪದಗ್ರಹಣ ಮಾಡಲಿದ್ದು, ಅದೇ ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಅರುಣ್‌ ಪುತ್ತಿಲ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಇನ್ನೊಂದೆಡೆ ಅವರು ಬೆಂಗಳೂರಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇಂದು ಪುತ್ತೂರಿನಲ್ಲಿ‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೈಠೆಕ್ ನಡೆದಿದ್ದು, ಸಭೆಯಲ್ಲಿ ಅರುಣ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ ಎನ್ನಲಾಗಿದೆ. ಇದಾದ ಬಳಿಕ ನಗರದ ಹೊರವಲಯದಲ್ಲಿರುವ ಸಮುದಾಯ ಭವನದಲ್ಲಿ ನಡೆಯುತ್ತಿರುವ ಪುತ್ತೂರು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪುತ್ತಿಲ ಪಕ್ಷ ಸೇರ್ಪಡೆ ವಿಷಯ ಪ್ರಮುಖ ವಿಷಯವಾಗಿದ್ದು, ಸಭೆಯ ಬಳಿಕ ಪುತ್ತಿಲ ಪಕ್ಷ ಸೇರ್ಪಡೆಯ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.

ಬಿಜೆಪಿ-ಸಂಘ ಪರಿವಾರದ ಸಭೆ ಬೇಷರತ್ ಸೇರ್ಪಡೆಗೆ ಒಪ್ಪಿಗೆ: ಅರುಣ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರು ಜ.30ರಂದು ಪುತ್ತೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಕಲ್ಲೇಗ ಭಾರತ್ ಮಾತಾ ಸಮುದಾಯ ಭವನ ಹಾಗೂ ಮುರ ಗೌಡ ಸಮುದಾಯ ಭವನದಲ್ಲಿ ಪ್ರತ್ಯೇಕ ಸಭೆ ನಡೆದಿದೆ.ಜ.30ರಂದು ಬೆಳಿಗ್ಗೆ ಸಂಘ ಪರಿವಾರದ ಆಂತರಿಕ ಬೈಠೆಕ್ ಪುತ್ತೂರಿನಲ್ಲಿ ನಡೆದಿದೆ.ಅದಾದ ಬಳಿಕ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದೆ.

ಬೇಷರತ್ ಸೇರ್ಪಡೆಗೆ ವಿಜಯೇಂದ್ರ ಸೂಚನೆ?: ಅರುಣ್ ಕುಮಾರ್ ಪುತ್ತಿಲ ಸಹಿತ ಪ್ರಮುಖರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಈ ಮೊದಲೇ ಭೇಟಿಯಾಗಿ ಸೇರ್ಪಡೆ ವಿಚಾರ ಪ್ರಸ್ತಾಪಿಸಿದ್ದರು.ಬೇಷರತ್ ಆಗಿ ಸೇರುವಂತೆ ವಿಜಯೇಂದ್ರ ಅವರೂ ಸೂಚನೆ ನೀಡಿದ್ದರು ಎನ್ನಲಾದ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದೆ.ರಾಜ್ಯಾಧ್ಯಕ್ಷರ ಪರವಾಗಿ ತಾನು ಬಂದಿರುವುದಾಗಿ ಹೇಳಿದ್ದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಂತೂರು ಅವರು ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ತಿಳಿದು ಬಂದಿದೆ.
ಪುತ್ತಿಲ ಅವರಿಗೆ ಪಕ್ಷದ ಹುದ್ದೆ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಬಜರಂಗದಳ, ಹಿಂದೂ ಜಾಗರಣ ವೇದಿಕೆಯ ಒಂದೀರ್ವರು ಬೈಠಕ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದರಾದರೂ ಅಂತಿಮವಾಗಿ ಪ್ರಮುಖರ ತೀರ್ಮಾನಕ್ಕೆ ಬದ್ಧ ಎಂದು ಹೇಳುವ ಮೂಲಕ ಸಹಮತ ವ್ಯಕ್ತಪಡಿಸಿದರು. ಎರಡೂ ಸಭೆಯಲ್ಲಿ ಕೂಡಾ ಪುತ್ತಿಲ ಅವರು ಬಿಜೆಪಿ ಸೇರುವುದಕ್ಕೆ ಪೂರ್ಣಪ್ರಮಾಣದ ಒಪ್ಪಿಗೆ ವ್ಯಕ್ತವಾಗಿದೆ.ಪುತ್ತಿಲ ಅವರು ಪುತ್ತಿಲ ಪರಿವಾರಕ್ಕೆ ರಾಜೀನಾಮೆ ನೀಡಿ ಹೊರ ಬಂದು ಪಕ್ಷಕ್ಕೆ ಸೇರುವುದು ಇತ್ಯಾದಿ ವಿಚಾರದ ಕುರಿತು ಚರ್ಚಿಸಿ ಅಂತಿಮ ನಿರ್ಧಾರಕೈಗೊಳ್ಳುವ ನಿಟ್ಟಿನಲ್ಲಿ ನಾಳೆ, ನಾಡಿದ್ದರೊಳಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸೋಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿರುವುದಾಗಿ ತಿಳಿದು ಬಂದಿದೆ.
ಪಕ್ಷದ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಅಪ್ಪಯ್ಯ ಮಣಿಯಾಣಿ, ಗೋಪಾಲಕೃಷ್ಣ ಹೇರಳೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪ್ರಕಾಶ್ ಪಿ.ಎಸ್ ಸಹಿತ ಪ್ರಮುಖರು ಬೈಠಕ್‌ನಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here