ಮಂಗಳೂರು(ಕೊಚ್ಚಿ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಎಸ್ ಡಿಪಿಐ ಮತ್ತು ಪಿಎಫ್ಐನ 15 ಮಂದಿ ಕಾರ್ಯಕರ್ತರಿಗೆ ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಿ ಜಿ ಶ್ರೀದೇವಿ ಮರಣದಂಡನೆ ಶಿಕ್ಷೆ ವಿಧಿಸಿ ಇಂದು (ಜನವರಿ 30) ತೀರ್ಪು ನೀಡಿದ್ದಾರೆ.
2021ರ ಡಿಸೆಂಬರ್ 19ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಪಿಎಫ್ ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರಾಗಿದ್ದ ಅರೋಪಿಗಳು ಕುಟುಂಬ ಸದಸ್ಯರ ಎದುರೇ ರಂಜಿತ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು. ಎಸ್ ಡಿಪಿಐ ಮುಖಂಡ ಕೆಎಸ್ ಶಾನ್ ಡಿಸೆಂಬರ್ 18ರ ರಾತ್ರಿ ಆಲೆಪ್ಪಿಯ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಂಪೊಂದು ದಾಳಿ ನಡೆಸಿ ಕೊಲೆಗೈದಿದ್ದ ಕೆಲವೇ ಗಂಟೆಗಳ ನಂತರ ಆರ್ ಎಸ್ ಎಸ್ ಕಾರ್ಯಕರ್ತ ಶ್ರೀನಿವಾಸನ್ ಅವರ ಕೊಲೆ ಘಟನೆ ನಡೆದಿತ್ತು. ಆಲೆಪ್ಪಿ ಜಿಲ್ಲೆಯಲ್ಲಿ ನಡೆದ 3 ಸರಣಿ ರಾಜಕೀಯ ಕೊಲೆಗಳಲ್ಲಿ ಕೊನೆಯದಾಗಿ ರಂಜಿತ್ ಕೊಲೆಯಾಗಿತ್ತು. ಮೊದಲ ಎಂಟು ಆರೋಪಿಗಳ ವಿರುದ್ಧ ಕೊಲೆಯ ಅಪರಾಧ ಸಾಬೀತಾಗಿದೆ ಮತ್ತು ಇತರ ಆರೋಪಿಗಳು ಕ್ರಿಮಿನಲ್ ಪಿತೂರಿಯಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ನಿಜಾಮ್, ಅಜ್ಮಲ್, ಅನೂಪ್, ಎಂಡಿ ಅಸ್ಲಾಂ, ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಜೀಬ್, ನವಾಜ್, ಶೆಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ, ಶಮ್ನಾಜ್ ಶಿಕ್ಷೆಗೊಳಗಾದವರಾಗಿದ್ದಾರೆ.