ಮಂಗಳೂರು(ಬಂಟ್ವಾಳ): ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ನಡೆದಿದೆ. ಮೃತ ಬೈಕ್ ಸವಾರ ಯುವಕನನ್ನು ಬೆಳ್ತಂಗಡಿಯ ರಮೇಶ್ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಪ್ರದೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಯುವಕ ಮೃತಪಟ್ಟಿದ್ದಾರೆ. ಪ್ರದೀಶ್ ಶೆಟ್ಟಿ ಬೆಳ್ತಂಗಡಿಯ ಮುತ್ತೂಟ್ಟು ಫೈನಾನ್ಸ್ ಸಂಸ್ಥೆಯ ಉದ್ಯೋಗಿಯಾಗಿದ್ದು, ಸಂಸ್ಥೆಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.