ಮಂಗಳೂರು: ಪತಿಗೆ 500ಕ್ಕೂ ಅಧಿಕ ಮಹಿಳೆಯರ ಜತೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿರುವ ಮಹಿಳೆಯೊಬ್ಬಳು ನ್ಯಾಯಕ್ಕಾಗಿ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆರತಿ ಎಂಬ ಮಹಿಳೆ ತಂಜಾವೂರು ಜಿಲ್ಲೆಯ ನಿವಾಸಿಯಾಗಿದ್ದು, ವಿವೇಕ್ರಾಜ್ ಎಂಬುವರ ಜತೆ ವಿವಾಹವಾಗಿತ್ತು. ಇಬ್ಬರು ಜತೆಯಲ್ಲೇ ವಾಸಿಸುತ್ತಿದ್ದು, ಒಮ್ಮೆ ಪತಿಯ ಸೆಲ್ಫೋನ್ ತೆಗೆದು ಪರಿಶೀಲನೆ ನಡೆಸಿದಾಗ ಆರತಿ ಒಂದು ಕ್ಷಣ ಶಾಕ್ ಒಳಗಾಗಿದ್ದಾರೆ. ಮಹಿಳೆಯರ ಜತೆಗಿನ ವಿಡಿಯೋ ಕಾಲ್ನಲ್ಲಿ ಬೆತ್ತಲೆಯಾದ ಅನೇಕ ಸ್ಕ್ರೀನ್ಶಾಟ್ಗಳು ಮತ್ತು ಗಂಡನ ಖಾಸಗಿ ಅಂಗದ ಫೋಟೋಗಳನ್ನು ನೋಡಿ ಆಘಾತಗೊಂಡಿದ್ದಾರೆ.
ಪತಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿಗೆ ಬರುವ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರ ಜತೆ ಮಾತನಾಡಿ, ಅವರನ್ನು ಪರಿಚಯಿಸಿಕೊಂಡು ಸುಮಾರು 500 ರಿಂದ 1000 ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳನ್ನು ತೆಗೆದಿದ್ದಾರೆ ಎಂದು ಆರತಿ ತನ್ನ ಪತಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತಿ ಮತ್ತು ಅವರ ಪಾಲಕರನ್ನು ಪ್ರಶ್ನೆ ಮಾಡಿದಾಗ ಈ ವಿಚಾರವನ್ನು ಬಹಿರಂಗಪಡಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರತಿ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಗಂಡನ ಅನೈತಿಕ ವಿಚಾರ ನನಗೆ ತಿಳಿಯಿತು ಎಂಬ ಕಾರಣಕ್ಕೆ ನಾನು ಎರಡು ತಿಂಗಳ ಗರ್ಭಿಣಿ ಎಂದು ನೋಡದೆ ನನಗೆ ಕಿರುಕುಳ ನೀಡಿದ್ದಾರೆ. ಇದರ ಪರಿಣಾಮ ಗರ್ಭಪಾತವೂ ಆಗಿದೆ. ಈ ಸಂಬಂಧ ತಂಜಾವೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ, ಯಾವೊಬ್ಬ ಪೊಲೀಸ್ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಗಂಡನ ವಿರುದ್ಧ ನೀಡಿರುವ ದೂರಿನ ತನಿಖೆಯನ್ನು ತಂಜಾವೂರು ಮಹಿಳಾ ಪೊಲೀಸರ ಬದಲಾಗಿ, ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ತಂಜಾವೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟೀಸ್ ಜಾರಿಗೊಳಿಸಿ ಸಿಐಡಿ ತನಿಖೆಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.