ಫೆ.6ರಂದು ರಾಜ್ಯ ಕಾಂಗ್ರೆಸ್​ನಿಂದ ದೆಹಲಿ ಚಲೋ ಪ್ರತಿಭಟನೆ- ಡಿಸಿಎಂ ಡಿಕೆ ಶಿವಕುಮಾರ್​ ಘೋಷಣೆ 

ಮಂಗಳೂರು(ಬೆಂಗಳೂರು): ಕೇಂದ್ರದ ತಾರತಮ್ಯ ನೀತಿ ವಿರೋಧಿಸಿ ಫೆ.6ರಂದು ದೆಹಲಿ ಚಲೋ ನಡೆಸುತ್ತೇವೆ. ಫೆಬ್ರವರಿ 7ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಎಲ್ಲರೂ ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅವರು ಎಲ್ಲಿ ಜಾಗ ಕೊಡುತ್ತಾರೆ ನೋಡುತ್ತೇವೆ. ನಮ್ಮ ಹಕ್ಕನ್ನ ಕೇಳಲು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್​ನಿಂದ ದೆಹಲಿ ಚಲೋ ಮಾಡುತ್ತೇವೆ. ತೆರಿಗೆ ತಾರತಮ್ಯ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಕರ್ನಾಟಕ ರಾಜ್ಯ ದೇಶದಲ್ಲೆ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿಲ್ಲ. 2018-19 ರಲ್ಲಿ ಅನುದಾನಕ್ಕಿಂತ 40% ರಿಂದ 45% ಕಡಿಮೆ ಆಗಿದೆ. ಪ್ರತಿ ವರ್ಷ 7ಸಾವಿರ, ಎಂಟು ಸಾವಿರ ಕೋಟಿ ರೂ. ಕಡಿಮೆ ಆಗುತ್ತಿದೆ. ಬಜೆಟ್ ಡಬಲ್ ಆದರೂ ತೆರಿಗೆ ಪಾಲು ಹೆಚ್ಚು ಬಂದಿಲ್ಲ ಎಂದು ಕಿಡಿಕಾರಿದ್ದಾರೆ. ಇದಲ್ಲದೇ ಯೋಜನೆಗಳ ವಿಚಾರದಲ್ಲೂ ಅನುದಾನ ಸಿಕಿಲ್ಲ. ಕಳೆದ ವರ್ಷದ ಬಜೆಟ್​ನಲ್ಲಿ ಅನೌನ್ಸ್ ಆಗಿದ್ದು ಕೊಟ್ಟಿಲ್ಲ. ನಾವು ಕೇಂದ್ರದ ಸಚಿವರಿಗೆ ಪತ್ರ ಬರೆದಿದ್ದೇವೆ. ನಮಗೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ತಿಳಿಸಿದ್ದೇವೆ. ಆದರೆ ಯಾವುದೇ ಉತ್ತರ ಕೇಂದ್ರದಿಂದ ಬಂದಿಲ್ಲ. ನಿನ್ನೆ ಬಜೆಟ್​ನಲ್ಲಿ ಏನಾದರೂ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು ಅದೂ‌ ಆಗಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here