ಮಂಗಳೂರು: ಪ್ರಾಥಮಿಕ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 10ನೇ ತರಗತಿ ಪಠ್ಯಕ್ರಮದಲ್ಲಿ 2 ಭಾಷೆಗಳ ಬದಲಿಗೆ 3 ಭಾಷೆಗಳನ್ನು ಪರಿಚಯಿಸಲು ಮುಂದಾಗಿದೆ.
10ನೇ ತರಗತಿಗೆ 3 ಭಾಷೆ, 7 ವಿಷಯಗಳು ಮತ್ತು 12ನೇ ತರಗತಿಗೆ 2 ಭಾಷಾ ಪತ್ರಿಕೆ ಒಳಗೊಂಡ ಆರು ಪಠ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು. ಶೈಕ್ಷಣಿಕ ಪರಿಶ್ರಮವನ್ನು ಹೆಚ್ಚಿಸುವ ಪ್ರಯತ್ನದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಉತ್ತೀರ್ಣ ಮಾನದಂಡದಲ್ಲಿಯೂ ಬದಲಾವಣೆ ಪ್ರಸ್ತಾಪಿಸಲಾಗಿದೆ. ಸದ್ಯ ಐದು ವಿಷಯಗಳಲ್ಲಿ ಉತ್ತೀರ್ಣರಾದರೆ ಸಾಕು. ಇದನ್ನು 10ಕ್ಕೆ ಹೆಚ್ಚಿಸುವುದು ಸೇರಿದಂತೆ ಹಲವು ಬದಲಾವಣೆಯ ಅಂಶಗಳನ್ನು ಸಿಬಿಎಸ್ಇ ಶಿಫಾರಸು ಮಾಡಿದೆ.
ಹಾಗೆಯೇ, 12ನೇ ತರಗತಿಯಲ್ಲಿ ಒಂದರ ಬದಲಿಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು. ಕನಿಷ್ಠ ಒಂದು ಸ್ಥಳೀಯ ಭಾರತೀಯ ಭಾಷೆಯಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು ರೂಪಿಸಲು ಮುಂದಾಗಿರುವ ಸಿಬಿಎಸ್ಇ ವೃತ್ತಿಪರ ಹಾಗೂ ಸಮಾನ ಶಿಕ್ಷಣದ ನಡುವೆ ಸಮನ್ವಯತೆ ಸ್ಥಾಪಿಸುವ ಗುರಿ ಹೊಂದಿದೆ. 9 ರಿಂದ 12ನೇ ತರಗತಿಯ ಶೈಕ್ಷಣಿಕ ರಚನೆಯ ಬದಲಾವಣೆಗೆ ಸಿಬಿಎಸ್ ಇ ರೂಪಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಲು ಸಿಬಿಎಸ್ ಇ ಸಂಯೋಜಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ರವಾನೆ ಮಾಡಲಾಗಿದೆ.