ಮಂಗಳೂರು: ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿದ್ದಾಕ್ಕೆ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಎಪ್ರಿಲ್ 3ರಿಂದ ಪ್ರತಿ ಬುಧವಾರ ವಿಮಾನ ಹಾರಾಟ ನಡೆಸಲಿರುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಿಸಿದೆ.
ವಿಮಾನ (IX 499) ಮಧ್ಯಾಹ್ನ 2:50ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 6:25ಕ್ಕೆ (ಜಿದ್ದಾ ಸಮಯ) ಜಿದ್ದಾ ತಲುಪಲಿದೆ. ಜಿದ್ದಾದಿಂದ ವಿಮಾನ (IX 498) ಬುಧವಾರ ರಾತ್ರಿ 7:25ಕ್ಕೆ (ಜಿದ್ದಾ ಸಮಯ) ಹೊರಟು ಮರುದಿನ (ಗುರುವಾರ) ಬೆಳಗ್ಗಿನ ಜಾವ 3:40ಕ್ಕೆ ಮಂಗಳೂರನ್ನು ತಲುಪಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ನ ಈ ಹೊಸ ವಿಮಾನಕ್ಕೆ ಬುಕಿಂಗ್ ಆರಂಭಗೊಂಡಿದೆ. ಈ ವಿಮಾನಕ್ಕಾಗಿ ಏರ್‌ಲೈನ್ 186-ಆಸನಗಳ ಬೋಯಿಂಗ್ 737-800 ವಿಮಾನವನ್ನು ನಿಯೋಜಿಸಲಿದೆ. ಪ್ರಸ್ತುತ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ, ಬಹರೈನ್ ದಮಾಮ್, ದೋಹಾ, ದುಬೈ, ಕುವೈತ್ ಮತ್ತು ಮಸ್ಕತ್‌ಗೆ ವಿಮಾನಗಳ ಹಾರಾಟ ಇದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿದಿನ ದುಬೈಗೆ ಎರಡು ವಿಮಾನಗಳನ್ನು ನಿರ್ವಹಿಸುತ್ತದೆ. ಇಂಡಿಗೋದ ನಾಲ್ಕು ವಿಮಾನಗಳು ವಾರದಲ್ಲಿ ಹಾರಾಟ ನಡೆಸುತ್ತಿವೆ.