ಮಂಗಳೂರು(ಹೊಸದಿಲ್ಲಿ): ಪತಂಜಲಿಯ ‘ದಿವ್ಯ ಮಂಜನ್’ ಟೂತ್ ಪೇಸ್ಟ್ ಸಸ್ಯಾಹಾರ ಎಂದು ತಪ್ಪಾಗಿ ಪ್ರತಿಪಾದಿಸಲಾಗಿದ್ದು, ಆ ಟೂತ್ ಪೇಸ್ಟ್ ನಲ್ಲಿ ಮಾಂಸಾಹಾರ ಪದಾರ್ಥಗಳಿವೆ ಎಂದು ವಕೀಲ ಯತಿನ್ ಶರ್ಮಾ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದಲ್ಲದೆ ಆ ಉತ್ಪನ್ನವನ್ನು ಸಸ್ಯಾಹಾರ ಎಂದು ಸೂಚಿಸಲು ಅದರ ಮೇಲೆ ಹಸಿರು ಬಿಂದುವನ್ನು ನಮೂದಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪತಂಜಲಿ ಸಂಸ್ಥೆಯ ತಪ್ಪು ಪ್ರತಿಪಾದನೆಯು ಸಾರ್ವಜನಿಕರನ್ನು ಹಾದಿ ತಪ್ಪಿಸುತ್ತಿದ್ದು, ಧಾರ್ಮಿಕ ಭಾವನೆಗಳು ಹಾಗೂ ಗ್ರಾಹಕರ ಆಯ್ಕೆ ಮೇಲೆ ಘಾಸಿಯುಂಟು ಮಾಡುವ ಮೂಲಕ ಕಾನೂನು ಕ್ರಮದ ಆಗ್ರಹಕ್ಕೆ ಕಾರಣವಾಗಿದೆ ಎಂದು ಯತಿನ್ ಶರ್ಮಾ ವಾದಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುಬ್ರಹ್ಮಣ್ಯಂ ಪ್ರಸಾದ್, ಆಯುಷ್ ಸಚಿವಾಲಯವು ಸ್ಥಾಪಿಸಿರುವ ಸಮಿತಿಯು, ಔಷಧ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥಗಳನ್ನು ಸಸ್ಯಾಹಾರ, ಮಾಂಸಾಹಾರ ಹಾಗೂ ಇನ್ನಿತರ ಪ್ರವರ್ಗ ಎಂದು ವರ್ಗೀಕರಿಸಲು ಮಾನದಂಡವನ್ನು ರೂಪಿಸುವಂತೆ ಸೂಚಿಸಿದ್ದು, ಈ ಕುರಿತು 10 ವಾರಗಳೊಳಗೆ ತನ್ನ ಶಿಫಾರಸು ಸಲ್ಲಿಸುವಂತೆ ಆಯುಷ್ ಸಲಹಾ ಮಂಡಳಿಗೆ ನಿರ್ದೇಶನ ನೀಡಿದ್ದಾರೆ. ಇದಕ್ಕೂ ಮುನ್ನ, ಕಳೆದ ವರ್ಷದ ಜುಲೈ ತಿಂಗಳಲ್ಲಿ ಯತಿನ್ ಶರ್ಮಾ ಈ ಕುರಿತು ಆಯುಷ್ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ಔಷಧಗಳು ಮತ್ತು ಪ್ರಸಾಧನ ಸಾಮಗ್ರಿಗಳ ನಿಯಮಗಳು, 1945ರನ್ವಯ ಮಾಂಸಾಹಾರ ಅಂಶವನ್ನು ಚಿಹ್ನೆ ಅಥವಾ ಗುರುತಿನ ಮೂಲಕ ಸೂಚಿಸಲು ಯಾವುದೇ ಅವಕಾಶವಿಲ್ಲ ಎಂದು ಆಯುಷ್ ಸಚಿವಾಲಯ ಪ್ರತ್ಯುತ್ತರ ನೀಡಿತ್ತು.