22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಪ್ರತ್ಯಕ್ಷ-ಭಿಕ್ಷೆ ಸ್ವೀಕರಿಸಲು ಮನೆಗೆ ಬಂದ ಪುತ್ರನ ಕಂಡು ಕಣ್ಣೀರಿಟ್ಟ ಪೋಷಕರು

ಮಂಗಳೂರು(ಉತ್ತರ ಪ್ರದೇಶದ): ಉತ್ತರ ಪ್ರದೇಶದ ಅಮೇಥಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೋಷಕರು ನಿಂದಿಸಿದರು ಎಂದು ಮನೆ ತೊರೆದಿದ್ದ 10 ವರ್ಷದ ಬಾಲಕ 22 ವರ್ಷಗಳ ನಂತರ ಸಾಧು ವೇಷದಲ್ಲಿ ಮನೆಗೆ ಮರಳಿದ್ದಾನೆ. ಮಗ ಮರಳಿ ಬಂದ ಖುಷಿಯಲ್ಲಿದ್ದ ಪೋಷಕರಿಗೆ, ಆತ ಬಂದಿರುವ ಉದ್ದೇಶ ತಿಳಿದು ಪೋಷಕರು ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಈ ಎಲ್ಲಾ ಘಟನೆ ನಡೆದಿದ್ದು, ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಖರೌಲಿ ಎಂಬ ಗ್ರಾಮದಲ್ಲಿ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ, 2002ರಲ್ಲಿ ಅಮೇಥಿ ನಿವಾಸಿಯಾದ ರತಿಪಾಲ್ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅವರ ಪತ್ನಿ ಅನಾರೋಗ್ಯದಿಂದ​ ನಿಧನ ಹೊಂದುತ್ತಾರೆ. ಮಗನನ್ನು ಮತ್ತು ಕುಟುಂಬವನ್ನು ನೋಡಿಕೊಳ್ಳಲು ರತಿಪಾಲ್​ ಭಾನುಮತಿ ಎಂಬ ಮಹಿಳೆಯೊಂದಿಗೆ ಎರಡನೇ ಮದುವೆಯಾಗುತ್ತಾರೆ. ರತಿಪಾಲ್ ತನ್ನ ಮಗ ಮತ್ತು ಭಾನುಮತಿ ಮಗಳೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು. 2002ರಲ್ಲಿ ಪುತ್ರ ಪಿಂಕು ಸಿಂಗ್ ಗಲಾಟೆ ಮಾಡಿದ್ದ ಎಂದು ತಂದೆ ತಾಯಿ ಇಬ್ಬರು ಬೈದಿದ್ದರು. ಇದರಿಂದ ಮನನೊಂದ ಪಿಂಕು ಮನೆ ತೊರೆದಿದ್ದ. ಆಗ ಪಿಂಕುಗೆ 11 ವರ್ಷ ವಯಸ್ಸು. ಮಗನಿಗಾಗಿ ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪಿಂಕು ಎಲ್ಲೂ ಪತ್ತೆಯಾಗಿರಲಿಲ್ಲ. ನಂತರ ಮಗ ತಮ್ಮ ಅದೃಷ್ಟದಲ್ಲಿಲ್ಲ ಎಂದು ಕೊರಗಿ ಹುಡುಕಾಟ ನಿಲ್ಲಿಸಿದ್ದರು.

ಘಟನೆ ನಡೆದು ಸುಮಾರು 22 ವರ್ಷಗಳ ನಂತರ, ಕಳೆದ ವಾರ ಪಿಂಕು ತನ್ನ ಹಳೆಯ ಮನೆಗೆ ಬಂದಿದ್ದಾನೆ. ಆತನ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆಯ ಗುರುತುಗಳು ಇರುವುದನ್ನು ಕಂಡು ಕುಟುಂಬ ಸದಸ್ಯರು ಆತನನ್ನು ಗುರುತಿಸಿದ್ದಾರೆ. ಬಳಿಕ ವಿಷಯವನ್ನು ದೆಹಲಿಯಲ್ಲಿ ನೆಲೆಸಿರುವ ಆತನ ಪೋಷಕರಿಗೆ ತಿಳಿಸಿದ್ದಾರೆ. ಇದನ್ನು ತಿಳಿದು ತಂದೆ ತಾಯಿ ಮನೆಗೆ ಬಂದು ಆತನ ಅವತಾರ ನೋಡಿ ಆಶ್ಚರ್ಯಚಕಿತರಾಗಿ ಆತನ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಮಗ ಪಿಂಕು ನಾನು ನಿಮ್ಮೊಂದಿಗೆ ಇರಲು ಅಥವಾ ಭೇಟಿಯಾಗಲು ಮನೆಗೆ ಬಂದಿಲ್ಲ. ಬದಲಿಗೆ ತಾನು ಸನ್ಯಾಸ ಧೀಕ್ಷೆ ಸ್ವೀಕರಿಸಿದ್ದು, ತಾಯಿಯಿಂದ ಭಿಕ್ಷೆ ಪಡೆದರೆ ಮಾತ್ರ ಸಂಪೂರ್ಣವಾಗಿ ಸನ್ಯಾಸ ಸ್ವೀಕಾರ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾನೆ. ಇದರಿಂದ ಆತನ ಪೋಷಕರ ಕಣ್ಣಾಲಿಗಳು ತುಂಬಿ ಬಂದಿದೆ. ತಂದೆ ಕಣ್ಣಲ್ಲಿ ನೀರು ತುಂಬಿ ಮಗನನ್ನು ಅಪ್ಪಿಕೊಂಡರೆ ತಾಯಿ ಭಿಕ್ಷೆ ನೀಡಲು ನಿರಾಕರಿಸಿ ಸನ್ಯಾಸತ್ವ ಬಿಡುವಂತೆ ಮನವಿ ಮಾಡಿದ್ದಾಳೆ. ಇದು ಯಾವುದಕ್ಕೂ ಒಪ್ಪದ ಪಿಂಕು ಸಿಂಗ್​ ಮನ ಮುಟ್ಟುವಂತೆ ಹಾಡೊಂದನ್ನು ಹಾಡಿ ತನ್ನ ಜೀವನ ಸಫಲವಾಗಲಿ ಎಂದು ನಿನ್ನ ಕೈಯಿಂದ ಭಿಕ್ಷೆ ಕೊಡು ತಾಯಿ ಎಂದು ಹೇಳಿದ್ದಾನೆ. ಬಳಿಕ ಭಿಕ್ಷೆ ಪಡೆದು ಅಲ್ಲಿಂದ ಹೊರಟು ಹೋಗಿದ್ದಾನೆ. 22 ವರ್ಷಗಳ ನಂತರ ಮನೆಗೆ ಬಂದ ಮಗ ತಾಯಿಂದ ಭಿಕ್ಷೆ ಪಡೆದು ಮರಳಿ ಹೋಗಿದ್ದು, ಪೋಷಕರು ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

LEAVE A REPLY

Please enter your comment!
Please enter your name here