ಮಂಗಳೂರು(ದೆಹಲಿ): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 370 ಹಾಗೂ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಇಂದು (ಫೆ.10) ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ಈ ಬಾರಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಸಸ್ಪೆನ್ಸ್ ಇಲ್ಲ. ಹಾಗೂ ಈ ಬಾರಿಯು ಕಾಂಗ್ರೆಸ್ ಹಾಗೂ ಅದನ್ನು ಬೆಂಬಲಿಸುವ ಪಕ್ಷಗಳು ವಿರೋಧ ಪಕ್ಷ ಸ್ಥಾನದಲ್ಲೇ ಇರಲಿದೆ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಶಾ ಈ ಸಭೆಯಲ್ಲಿ ಸಿಎಎ ಬಗ್ಗೆ ಮಾತನಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ 2019ರಲ್ಲಿ ಜಾರಿಗೊಳಿಸಲಾದ ಕಾನೂನು, ಈ ಕಾನೂನಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಲಾಗುವುದು, ಲೋಕಸಭೆ ಚುನಾವಣೆಗೂ ಮುನ್ನ ಭಾರತದಾದ್ಯಂತ ಜಾರಿಗೆ ತರಲಾಗುವುದು. ಈ ಕಾನೂನಿನ ಬಗ್ಗೆ ನಮ್ಮ ಮುಸ್ಲಿಂ ಸಹೋದರರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ನೀಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ. ಈ ಕಾನೂನಿನ ಮೂಲಕ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. 2024ರ ಚುನಾವಣೆಯು ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಚುನಾವಣೆಯಾಗಿರುವುದಿಲ್ಲ, ಇದು ಅಭಿವೃದ್ಧಿ ಮತ್ತು ಜನರಿಗೆ ನೀಡಿರುವ ಭರವಸೆಯ ಚುನಾವಣೆಯಾಗಲಿದೆ ಎಂದು ಹೇಳಿದ್ದಾರೆ.