ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಬೈಕೊಂದಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫರಂಗಿಪೇಟೆ ಬಳಿಯ ಅರ್ಕುಳ ಕ್ರಾಸ್ ನಲ್ಲಿ ಫೆ.11ರಂದು ನಡೆದಿದ್ದು, ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಅರ್ಕುಳದ ಅಬ್ಬೆಟ್ಟು ನಿವಾಸಿ ಚರಣ್ ರಾಜ್ (34) ಅಪಘಾತದಲ್ಲಿ ಮೃತಪಟ್ಟ ಯುವಕ. ಚರಣ್ ಬೆಳಗ್ಗೆ ಅಡ್ಯಾರಿಗೆಂದು ಬರುತ್ತಿದ್ದಾಗ ಅರ್ಕುಳ ಕ್ರಾಸ್ ನಲ್ಲಿ ಹೆದ್ದಾರಿಗೆ ತಿರುವು ಪಡೆಯುತ್ತಿದ್ದಾಗಲೇ ಮಂಗಳೂರಿನಿಂದ ಪುತ್ತೂರಿನತ್ತ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಯಮದೂತನಂತೆ ಬಂದು ಅಪ್ಪಳಿಸಿದೆ. ಚಾಲಕನ ಅತೀವೇಗದಿಂದಾಗಿ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರಿನ ಇನ್ನೊಂದು ಬದಿಗೆ ಹೋಗಿದ್ದರೆ, ಬೈಕ್ ಕೂಡ ರಸ್ತೆಯ ಇನ್ನೊಂದು ಬದಿಗೆ ಹೋಗಿ ಬಿದ್ದಿದೆ. ಸವಾರನೂ ರಸ್ತೆಯ ಇನ್ನೊಂದು ಕಡೆಗೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಸಾವು ಕಂಡಿದ್ದಾರೆ. ಅರ್ಕುಳ ಕ್ರಾಸ್ ನಲ್ಲಿ ನಿರಂತರ ಅಪಘಾತ ಆಗುತ್ತಿರುವುದರಿಂದ ಬ್ಯಾರಿಕೇಡ್ ಹಾಕಲಾಗಿದೆ. ಭಾನುವಾರ ಆಗಿದ್ದರಿಂದ ಹೆದ್ದಾರಿಯಲ್ಲಿ ವಾಹನ ಕಡಿಮೆ ಇದ್ದುದರಿಂದ ಬಸ್ ಅತೀ ವೇಗದಿಂದ ಧಾವಿಸಿ ಬಂದಿತ್ತು. ಇದೇ ವೇಳೆ, ಸವಾರ ಹೆದ್ದಾರಿ ಕ್ರಾಸ್ ಮಾಡಲು ರಸ್ತೆಯ ಮಧ್ಯಕ್ಕೆ ಬಂದಿದ್ದು, ಬಸ್ ನೇರವಾಗಿ ಬೈಕಿಗೆ ಡಿಕ್ಕಿಯಾಗಿದೆ. ಇದರಿಂದ ಸಿಟ್ಟುಗೊಂಡ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.