ಮಂಗಳೂರು: ಪ್ರತಿ ಯೂನಿಟ್‌ಗೆ 59 ಪೈಸೆ ದರವನ್ನು ಹೆಚ್ಚಿಸಬೇಕು ಎಂಬ ಮೆಸ್ಕಾಂ ಪ್ರಸ್ತಾವಕ್ಕೆ ವಿವಿಧ ಕೈಗಾರಿಕೆಗಾ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.
ಮಂಗಳೂರಿನ ಮೆಸ್ಕಾಂ ಸಭಾಭವನದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಪರಿಷ್ಕರಣೆ ಕುರಿತು ನಡೆದ ಸಾರ್ವಜನಿಕ ಸಭೆಯಲ್ಲಿ ಈಗ ಇರುವ ದರವೇ ದುಬಾರಿ ಆಗಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಎಂಎಸ್‌ಎಂಇ ಈಗಾಗಲೇ ಸಂಕಷ್ಟದಲ್ಲಿವೆ. ಅದರ ಜತೆಗೆ ವಿದ್ಯುತ್ ದರ ಹೆಚ್ಚಳ ಮಾಡಿದರೆ ತೊಂದರೆ ಆಗಲಿದೆ ಎಂದು ಕೆಸಿಸಿಐನ ಪ್ರತಿನಿಧಿಗಳು ಸಭೆಯಲ್ಲಿ ಒತ್ತಾಯಿಸಿದರು. ಬಿ.ಎ. ನಝೀರ್ ಅವರು ಮತನಾಡಿ, ಈ ವರ್ಷದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿರುವುದರಿಂದ ಗುತ್ತಿಗೆ ಬೇಡಿಕೆಗಿಂತ ಅಲ್ಪಪ್ರಮಾಣದಲ್ಲಿ ಹೆಚ್ಚುವರಿ ವಿದ್ಯುತ್ ಬಳಕೆ ಮೇಲೆ ದಂಡ ಹಾಕುವುದನ್ನು ಕೈಬಿಡಬೇಕು. ಪ್ರೀಪೇಯ್ಡ್ ಮೀಟರ್ ಅಳವಡಿಕೆ ಜಾರಿಯಾಗಿಲ್ಲ ಎಂದರು. ಮೀನುಗಾರಿಕೆ ಅವಲಂಬಿಸಿ ಕಾರ್ಯಾಚರಿಸುತ್ತಿರುವ ಐಸ್ ಫ್ಯಾಕ್ಟರಿಗಳ ವತಿಯಿಂದ ಪ್ರತಿ ಬಾರಿ ವಿದ್ಯುತ್ ದರ ಏರಿಕೆ ಮಾಡದಂತೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಆದರೆ ಆಯೋಗ ಮಾತ್ರ ಪ್ರತಿ ಬಾರಿ ದರ ಹೆಚ್ಚಳದ ಮನವಿ ಪುರಸ್ಕರಿಸುತ್ತಿದೆ. ಇದರಿಂದಾಗಿ ಕನಿಷ್ಟ 5 ಅಥವಾ 10 ಪೈಸೆ ಹೆಚ್ಚಳದಿಂದಲೂ ಭಾರೀ ದೊಡ್ಡ ಹೊಡೆತ ಬೀಳುತ್ತದೆ. ಈ ಬಗ್ಗೆ ಆಯೋಗ ಪರಿಣಿಸಬೇಕು ಎಂದು ಕರ್ನಾಟಕ ಮಂಜುಗಡ್ಡೆ ಸ್ಥಾವರಗಳ ಪರವಾಗಿ ರಾಜೇಂದ್ರ ಸುವರ್ಣ ಆಗ್ರಹಿಸಿದರು. ಮೆಸ್ಕಾಂ ನೀಡಿರುವ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ ಎಲ್‌ಟಿ, ಗೃಹ ಬಳಕೆಯಲ್ಲಿ ಕಡಿಮೆ ಆಗಿದ್ದರು ಎಚ್‌ಟಿ ಬಳಕೆದಾರರು ಹೆಚ್ಚಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ಜಾಸ್ತಿ ಆಗಿದೆ. ದರ ಏರಿಕೆ ಪ್ರಸ್ತಾವದಲ್ಲಿ ಅಗತ್ಯ ಕಾರಣ ನೀಡಿಲ್ಲ. ಎಂಎಸ್‌ಇಜೆಡ್‌ಗಳಿಗೆ ಇಲ್ಲದ ದರ ಏರಿಕೆ ಸಣ್ಣ ಗ್ರಾಹಕರಿಗೆ ಯಾಕೆ? ಎಂದು ಭಾರತೀಯ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ ಹೇಳಿದರು.
ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದು, ಪ್ರೀಪೇಯ್ಡ್ ಮೀಟರ್ ಯಾರು ಕೇಳಿದರೂ ಅಳವಡಿಸಲು ಕ್ರಮ ವಹಿಸುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಯೋಗದ ಸದಸ್ಯ ಎಂ.ಡಿ ರವಿ ಅವರು ಹಾಜರಿದ್ದು, ಆಕ್ಷೇಪಣೆಗಳನ್ನು ಆಲಿಸಿದರು.