ಉಡುಪಿ ಕರಾವಳಿ ಬೈಪಾಸ್, ಮಲ್ಪೆ ರಾ.ಹೆ. ಕಾಮಗಾರಿ-ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತೀವ್ರ ತರಾಟೆ-ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ನಡೆದ ಘಟನೆ

ಮಂಗಳೂರು(ಉಡುಪಿ): ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್-ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮೀನುಗಾರ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣ, ಕೋಟ್ಯಾಂತರ ರೂ. ಆದಾಯ ಬರುವ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಕೇಂದ್ರವಾಗಿರುವ ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸರ್ವೆ, ಅಗಲ, ಉದ್ದ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಕೋಟ್ಯಂತರ ರೂ. ಆದಾಯ ಇರುವ ಈ ರಸ್ತೆಗೆ ಸಂಬಂಧಿಸಿ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಹಾಕುವುದರಲ್ಲಿ ಅರ್ಥ ಇದೆಯೇ ಎಂದು ಅವರು ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ. ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ. ನೀವು ನಮ್ಮ ಜನಪ್ರತಿನಿಧಿ ಅಲ್ಲವೇ ನಿಮಗೆ ಕರ್ತವ್ಯ ಇಲ್ಲವೇ ಜನರನ್ನು ಯಾಕೆ ನೀವು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here