ಮಂಗಳೂರು: ಜನರು ನಮಗೆ ಅಧಿಕಾರ ಕೊಟ್ಟ ನಂತರ ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆ ಮೂಲಕ ಜನತೆಗೆ ಶಕ್ತಿ ನೀಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅವರು ಅಡ್ಯಾರ್ ನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡುದ್ದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇಲ್ಲಿರುವ ಕಾರ್ಯಕರ್ತರು ನಮ್ಮ ಯೋಜನೆ ಜಾರಿಯಿಂದಾಗಿ ಆತ್ಮವಿಶ್ವಾಸದಿಂದ ಜನರ ಮುಂದೆ ಹೋಗಿ ಮತ ಕೇಳಬಹುದು. ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಕಪ್ಪು ಹಣ ತಂದು 15 ಲಕ್ಷ ನೀಡುವುದಾಗಿ ಹೇಳಿದ್ದರು. ಎಲ್ಲಾ ರೈತರ ಆದಾಯ ಡಬಲ್ ಮಾಡುತ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅವರು ಹೇಳಿದ್ದನ್ನು ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು.
ಮಂಗಳೂರು ಐತಿಹಾಸಿಕ ಭೂಮಿ. ಕೋಟಿ ಚೆನ್ನಯನವರಿಂದ, ವೀರರಾಣಿ ಅಬ್ಬಕ್ಕ ದೇವಿ, ನಾರಾಯಣ ಗುರುಗಳ ಭೂಮಿ ಇದು. ಈ ಭೂಮಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಇತಿಹಾಸವಿದೆ. ಆಸ್ಕರ್ ಫರ್ನಾಂಡೀಸ್ ಹಾಗೂ ಜನಾರ್ದನ ಪೂಜಾರಿ ಅವರು ಈ ರಾಜ್ಯದಲ್ಲಿ ಅನೇಕ ನಾಯಕರನ್ನು ಬೆಳೆಸಿ ಪಕ್ಷ ಬಲವರ್ಧನೆ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಪರಿಣಾಮ ಇಂದು ಬ್ಯಾಂಕುಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುವಂತಾಗಿದೆ. ಇಂದಿರಾ ಗಾಂಧಿ ಅವರ ಕಾರ್ಯಕ್ರಮ ಗಮನದಲ್ಲಿಟ್ಟುಕೊಂಡು ಪೂಜಾರಿ ಅವರು ಈ ಸಾಲ ಮೇಳ ಕಾರ್ಯಕ್ರಮ ಮಾಡುತ್ತಿದ್ದರು. ನಾನು 1985ರ ಚುನಾವಣೆಯಲ್ಲಿ ಸೋತಿದ್ದಾಗ ನಾನು ಪೂಜಾರಿ ಅವರನ್ನು ಕರೆದುಕೊಂಡು ಹೋಗಿ ಕನಕಪುರದಲ್ಲಿ ಸಾಲ ಮೇಳ ಕಾರ್ಯಕ್ರಮ ಮಾಡಿದೆ. ಅದರ ಪರಿಣಾಮವಾಗಿ ಜಿಲ್ಲಾ ಪಂಚಾಯ್ತಿ ಸದಸ್ಯನಾದೆ. ನಂತರ ಶಾಸಕನಾಗಿ ನಂತರ ಇಲ್ಲಿಯವರೆಗೂ ನಿರಂತರವಾಗಿ ಶಾಸಕನಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಕಾರ್ಯಕ್ರಮ ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ. ಈ ಭಾಗದ ಜನ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಇದೇ ಭೂಮಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆಯನ್ನು ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಬಂದ ನಂತರ ಜಾರಿಗೆ ಬಂದ ಮೊದಲ ಗ್ಯಾರಂಟಿ ಯೋಜನೆ ಇದಾಗಿದೆ. ಇದರಿಂದ ಕೋಟ್ಯಂತರ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ಜಾರಿಯಾದ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸರ್ಕಾರಕ್ಕೆ ಪತ್ರ ಬರೆದು ನಿಮ್ಮ ಯೋಜನೆಯಿಂದ ಈ ಭಾಗದ ಪುಣ್ಯಕ್ಷೇತ್ರಗಳಿಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ. ದೇವಾಲಯಗಳಲ್ಲಿ ಮುಖ್ಯಮಂತ್ರಿಗಳ ಹೆಸರಲ್ಲಿ ಪೂಜೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ನಾನು ಚುನಾವಣೆ ಸಮಯದಲ್ಲಿ ಒಂದು ಮಾತು ಹೇಳುತ್ತಿದ್ದೆ, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಸಮೃದ್ಧಿಯಾಯಿತು, ಕರ್ನಾಟಕ ಪ್ರಗತಿಯಾಯಿತು. ಇದು ನಿಮ್ಮೆಲ್ಲರ ಶಕ್ತಿಯಲ್ಲವೇ? ಎಂದ ಡಿ.ಕೆ.ಶಿವಕುಮಾರ್, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಒಂದು ಮಾತು ಹೇಳಿದೆ, ಜನ ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ನಮ್ಮನ್ನು ನೀವು ಯಾವ ರೀತಿಯಾದರೂ ಬಳಸಿಕೊಳ್ಳಿ. ನಿಮ್ಮ ಶ್ರಮ, ಶಕ್ತಿಯಿಂದ ಕಾಂಗ್ರೆಸ್ ಪಕ್ಷ 136 ಸೀಟುಗಳಲ್ಲಿ ಗೆದ್ದು ರಾಜ್ಯದ ಸೇವೆ ಮಾಡುತ್ತಿದೆ. ಮಂಗಳೂರು, ಉಡುಪಿ ಸ್ನೇಹಿತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಾವು ಕೇವಲ 2 ಸೀಟು ಮಾತ್ರ ಗೆದ್ದಿದ್ದೇವೆ, ಹೆಚ್ಚು ಗೆಲ್ಲಲಾಗುವುದಿಲ್ಲ ಎಂದು ಭಾವಿಸಬೇಡಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷದಲ್ಲಿದ್ದರೂ ಇದೇ ಉಡುಪಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರಾವಳಿ, ಮಲೆನಾಡಿನ ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ನಮ್ಮ ಜನಪರ ಕಾರ್ಯಕ್ರಮಗಳಿಂದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ.
ಈಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದೇಕೆ? ಈ ಹಿಂದೆ ದೇವೇಗೌಡರು, ಮೋದಿ ಪ್ರಧಾನಮಂತ್ರಿಯಾದರೆ ದೇಶಬಿಟ್ಟು ಹೋಗುತ್ತೇವೆ ಎಂದಿದ್ದರು. ಅದಕ್ಕೆ ಮೋದಿ ಅವರು ನಮ್ಮ ಮನೆಗೆ ಬನ್ನಿ ಜಾಗ ಕೊಡುತ್ತೇನೆ ಎಂದಿದ್ದರು. ಆದರೆ ಇಂದು ದೇವೇಗೌಡರು, ನಾನೇ ನನ್ನ ಮಗನನ್ನು ಬಿಜೆಪಿ ಜತೆ ಹೋಗಲು ಹೇಳಿದ್ದೇನೆ ಎನ್ನುತ್ತಿದ್ದಾರೆ. ರಾಜಕಾರಣದಲ್ಲಿ ಯಾರು ಯಾವುದೇ ನಿರ್ಧಾರ ಮಾಡಿಕೊಳ್ಳಲಿ. ಯಾರೇ ಒಂದಾಗಲಿ, ನಾವು ಚಿಂತೆ ಮಾಡುವುದು ಬೇಡ. ನಮ್ಮ ಸಿದ್ಧಾಂತ, ನಂಬಿಕೆ, ತತ್ವ, ನೀತಿ ಮೇಲೆ ಕೆಲಸ ಮಾಡೋಣ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಸಿದ್ಧಾಂತ ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಮಂತ್ರಿಗಳು 370 ಸೀಟು ಗೆಲ್ಲುತ್ತೇವೆ ಎಂದು ಹೇಳಬಹುದು. ಆದರೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ದೇಶ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶ ಹೊಸ ನಾಯಕತ್ವ ಬದಲಾವಣೆ ಮಾಡುವ ಚಿಂತನೆಯಲ್ಲಿದೆ. ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಕೂತಿದ್ದ ಸ್ಥಾನದಲ್ಲಿ ಕೂತು ದೇಶದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ತ್ರಿವರ್ಣ ಧ್ವಜವನ್ನು ಕೊಟ್ಟಿದೆ. ನೀವು ಹಳ್ಳಿ ಹಳ್ಳಿಗೆ ಹೋಗಿ ಈ ಪಕ್ಷಕ್ಕೆ ಹೆಚ್ಚಿನ ಸೀಟು ಗೆಲ್ಲುವಂತೆ ಮಾಡಬೇಕು. ನಾವು ಸೋಲುವುದಿಲ್ಲ ಎಂಬ ಆತ್ಮವಿಶ್ವಾಸದಿಂದ ನೀವು ಸಂಘಟನೆ ಮಾಡಿ. ನಿನ್ನೆ ನಮ್ಮ ಸರ್ಕಾರ ಐತಿಹಾಸಿಕ ಬಜೆಟ್ ಮಂಡನೆ ಮಾಡಿದೆ. ನಾನು 35 ವರ್ಷಗಳಿಂದ ವಿಧಾನಸಭೆಯಲ್ಲಿದ್ದೇನೆ. ಯಾವುದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬಜೆಟ್ ಅನ್ನು ಧಿಕ್ಕರಿಸಿ ಹೊರನಡೆದಿರಲಿಲ್ಲ. ಆದರೆ ನಿನ್ನೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಜೆಟ್ ಧಿಕ್ಕರಿಸಿದ್ದಾರೆ. ಇದು ಅವರು ಬಜೆಟ್ ಗೆ ಮಾಡಿದ ಅಪಮಾನವಲ್ಲ, ಈ ರಾಜ್ಯದ ಜನರಿಗೆ ಮಾಡಿದ ಅಪಮಾನ. ವಿರೋಧ ಪಕ್ಷದವರು ಏನೇ ತಂತ್ರ ಮಾಡಿದರೂ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರ ನಡೆಸಲಿದೆ. ನಂತರ ಮತ್ತೆ ಐದು ವರ್ಷ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮ ವಿಶ್ವಾಸ ನನಗಿದೆ. ಹೀಗಾಗಿ ನೀವು ನಮಗೆ ಶಕ್ತಿ ನೀಡಬೇಕು. ಈ ದೇಶವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.