ಜೆರೋಸಾ ಶಾಲಾ ಶಿಕ್ಷಕಿಯ ಬಂಧನಕ್ಕೆ ಆಗ್ರಹಿಸಿ ವಿಎಚ್ ಪಿ, ಭಜರಂಗದಳದಿಂದ ಪ್ರತಿಭಟನೆ-ಅನುಮತಿ ಇಲ್ಲದೆ ಮೆರವಣಿಗೆಗ ಮುಂದಾದ ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಇತರರ ಮೇಲೆ ದಾಖಲಿಸಲಾದ ಪ್ರಕರಣ ಹಿಂಪಡೆಯಬೇಕು ಹಾಗೂ ಆರೋಪಿತ ಶಿಕ್ಷಕಿಯನ್ನು ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಸೋಮವಾರ(ಫೆ.19) ಪ್ರತಿಭಟನೆ ನಡೆಯಿತು.

ಮಂಗಳೂರಿನ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯ ಸಂದರ್ಭ ಶಿಕ್ಷಕಿ ಪ್ರಭಾ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವನಾನಂದ ಮೆಂಡನ್, ಸಂತ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿ ಪಾಠ ಮಾಡಿದ್ದಾರೆ. ಶಿಕ್ಷಕಿಯನ್ನು ವಜಾಗೊಳಿಸುವಂತೆ ಪ್ರತಿಭಟನೆ ಮಾಡಿದ ಶಾಸಕರು, ಮನಪಾ ಸದಸ್ಯರು, ವಿಎಚ್ ಪಿ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಪೊಲೀಸ್ ಆಯುಕ್ತರಿಗೆ ಮನವಿ ನೀಡಲು ಅವಕಾಶ ನೀಡಬೇಕು. ನೀಡದಿದ್ದರೂ ಮೆರವಣಿಗೆಯಲ್ಲಿ ಹೋಗುತ್ತೇವೆ ಎಂದು ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಮುನ್ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕಳುಹಿಸಿದರು. ಪ್ರತಿಭಟನಾಕಾರರು ಮೆರವಣಿಗೆಗೆ ಪೂರ್ವ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here