ಮಂಗಳೂರು(ಬೆಂಗಳೂರು): ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ರಾಷ್ಟ್ರ ಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮೊದಲು ಹಾಡುವುದನ್ನು ಕಡ್ಡಾಯಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಬಿಡುಗಡೆಗೊಳಿಸಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿ ಮತ್ತೆ ಆದೇಶ ಹೊರಡಿಸಿದ್ದು, ಗೊಂದಲಗಳಿಗೆ ತೆರೆ ಎಳೆದಿದೆ.
ಸರಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಆರಂಭದಲ್ಲಿ ನಾಡಗೀತೆಯನ್ನು ಹಾಡಬೇಕೆಂದು ಸರಕಾರ ತಿದ್ದುಪಡಿ ಆದೇಶದಲ್ಲಿ ಮಾಹಿತಿ ನೀಡಿದೆ. ಇದಕ್ಕೂ ಮೊದಲು ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂಬುದಾಗಿ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.