ಮಂಗಳೂರು: ದೇಶದ ಹಿರಿಯ ಗಝಲ್ ಗಾಯಕ, ಪದ್ಮಶ್ರೀ ಪಂಕಜ್ ಉದಾಸ್ ಅವರು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದಿದ್ದ ಪಂಕಜ್ ಉದಾಸ್ ತನ್ನ 73ನೇ ವಯಸ್ಸಿನಲ್ಲಿ ಇಂದು ನಿಧನರಾಗಿದ್ದಾರೆ. ಪಂಕಜ್ ಉದಾಸ್ ಮರಣ ಹೊಂದಿರುವುದನ್ನು ಅವರ ಕುಟುಂಬವು ಮಾಧ್ಯಮಗಳಿಗೆ ನೀಡಿದ ಅಧಿಕೃತ ಹೇಳಿಕೆಯಲ್ಲಿ ಧೃಡಪಡಿಸಿದೆ.
”ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರವರಿ 26ರಂದು ಪದ್ಮಶ್ರೀ ಪಂಕಜ್ ಉದಾಸ್ ಅವರ ನಿಧನದ ದುಃಖದ ಸುದ್ದಿಯನ್ನು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ ” ಎಂದು ಹೇಳಿಕೆಯಲ್ಲಿ ಕುಟುಂಬ ತಿಳಿಸಿದೆ. ಪಂಕಜ್ ಉದಾಸ್ ಅವರು ದೇಶದ ಕಂಡ ಒಬ್ಬ ಅತ್ಯುತ್ತಮ ಗಝಲ್ ಗಾಯಕರಾಗಿದ್ದರು. ದೇಶಾದ್ಯಂತ ಗಝಲ್‌ನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಪಂಕಜ್ ಬಹುಮುಖ್ಯ ಕೊಡುಗೆ ನೀಡಿದ್ದಾರೆ. ಉದಾಸ್ ಏಪ್ರಿಲ್ 17, 1951 ರಂದು ಗುಜರಾತ್‌ನ ಸಾವರ್ಕುಂಡ್ಲಾದಲ್ಲಿ ಜನಿಸಿದ್ದರು. ನಾಮ್ (1986) ಚಿತ್ರದ ‘ಚಿಟ್ಟಿ ಆಯೀ ಹೈ’ ಹಾಡಿನ ಮೂಲಕ ಅವರು ವೃತ್ತಿಪರ ಗಾಯಕರಾಗಿ ಗುರುತಿಸಿಕೊಂಡಿದ್ದರು. ಅವರು ಹಲವಾರು ಆಲ್ಬಂಗಳನ್ನು ರಚಿಸಿದ್ದು, ಪ್ರಸಿದ್ಧ ಗಝಲ್ ಗಾಯಕರಾಗಿ ಜಗತ್ತಿನ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹಲವಾರು ಬಾಲಿವುಡ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದರು. ಇವರ ಸಂಗೀತ ಸೇವೆಯನ್ನು ಗುರುತಿಸಿ 2006ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ, ಗೌರವಿಸಿತ್ತು.