ಮಂಗಳೂರು/ಬೆಂಗಳೂರು: ರೈತನೆಂದು ಹೇಳಲಾದ ವ್ಯಕ್ತಿಯೊಬ್ಬ ಕೊಳೆ ಬಟ್ಟೆ ಧರಿಸಿದ್ದಾನೆಂದು ನಮ್ಮ ಮೆಟ್ರೊದ ಭದ್ರತಾ ಸಿಬ್ಬಂದಿ ಆತನಿಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ. ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹರಿದಾಡುತ್ತಿದೆ. ಘಟನೆ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್, ‘ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ, ಭದ್ರತಾ ಮೇಲ್ವಿಚಾರಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ’ ಎಂದು ಎಕ್ಸ್ ತಾಣದಲ್ಲಿ ಮಾಹಿತಿ ನೀಡಿದೆ.
ರೈತನೆಂದು ಹೇಳಲಾದ ವ್ಯಕ್ತಿ ತಲೆಮೇಲೆ ಗಂಟು ಹೊತ್ತುಕೊಂಡು ಮೆಟ್ರೊ ನಿಲ್ದಾಣ ಪ್ರವೇಶಿಸಿದ್ದರು. ‘ಈ ವ್ಯಕ್ತಿ ಕೊಳೆ ಬಟ್ಟೆ ಧರಿಸಿದ್ದಾರೆಂದು ಭದ್ರತಾ ಸಿಬ್ಬಂದಿ ಮೆಟ್ರೊದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಿಲ್ಲ’ ಎಂದು ವ್ಯಕ್ತಿಯೊಬ್ಬರು ಸ್ಥಳದಿಂದ ವಿಡಿಯೊ ಮಾಡಿ ಹರಿಯ ಬಿಟ್ಟಿದ್ದರು. ವ್ಯಕ್ತಿಯನ್ನು ಒಳಗೆ ಬಿಡಿ ಎಂದು ವಿಡಿಯೋ ಮಾಡುತ್ತಿದ್ದವರು ಹಾಗೂ ಸ್ಥಳದಲ್ಲಿದ್ದ ಕೆಲವರು ಭದ್ರತಾ ಸಿಬ್ಬಂದಿಗೆ ಒತ್ತಾಯಿಸಿದ್ದರು. ಆ ಬಳಿಕ ವ್ಯಕ್ತಿ ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ನಮ್ಮ ಮೆಟ್ರೊದ ಭದ್ರತಾ ಸಿಬ್ಬಂದಿಯ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://x.com/DeepakN172/status/1761238754210001143?s=20
https://x.com/OfficialBMRCL/status/1761992025069822342?s=20