ಪುತ್ತೂರು ಮೂಲದ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ – ಉಳ್ಳಾಲ ಠಾಣೆಗೆ ಪುತ್ತಿಲ ಭೇಟಿ – ಠಾಣಾಧಿಕಾರಿಗಳ ಜೊತೆ ಮಾತುಕತೆ

ಮಂಗಳೂರು‌(ಉಳ್ಳಾಲ): ಪುತ್ತೂರು ಮೂಲದ ಪಿಎಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಠಾಣಾಧಿಕಾರಿ ಜೊತೆ ಮಾತನಾಡಿದ ಪುತ್ತಿಲ, ಡ್ರಗ್ ಪೆಡ್ಲರ್ ಶಾರೂಕ್ ನನ್ನು ಶೀಘ್ರ ಬಂಧಿಸಿ ಈತನ ಜಾಲದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.ಈಗಾಗಲೇ ಉಳ್ಳಾಲದಲ್ಲಿ ಡ್ರಗ್ಸ್ ಜಾಲದಲ್ಲಿ ಯುವತಿಯರನ್ನು ಸಿಲುಕಿಸಿ ಲವ್ ಜಿಹಾದ್ ಮೂಲಕ ಭಯೋತ್ಪಾದನೆಗೆ ಸಿಲುಕಿಸಿರುವುದು ಗೊತ್ತಿರುವಾಗ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದು ಹೇಳಿರುವ ಪುತ್ತಿಲ, ಉಳ್ಳಾಲದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಇಡೀ ಜಿಲ್ಲೆಗೆ ಅಪಾಯಕಾರಿ ಬೆಳವಣಿಗೆ, ಇದನ್ನು ಮಟ್ಟ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಾರಕವಾಗಲಿದೆ ಎಂದು ಹೇಳಿದ್ದಾರೆ.ಶಿಕ್ಷಣ ಕಾಶಿಯಾಗಿರುವ ತುಳುನಾಡಿನಲ್ಲಿ ಕೆಲಸ ಇಲ್ಲದ ಕೆಲ ಯುವಕರು ಗಾಂಜಾ ಡ್ರಗ್ಸ್ ವ್ಯವಹಾರ ಮೂಲಕ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಕೆಲಸ ಇಲ್ಲದೆ ಶೋಕಿ ಮಾಡುವ ಕೆಲವರ ಬಗ್ಗೆ ಇಲಾಖೆ ಗಮನಿಸಬೇಕು ಹಾಗೂ ಪಿಜಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.

ಎಂಎಸ್ಸಿ ಪೂರೈಸಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಳು. ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಯನ್ನು ಫೆ.17ರಂದು ರೈಲಿನಲ್ಲಿ ಶಾರೂಕ್ ಎಂಬಾತ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದ್ದು ಪೊಲೀಸ್ ಇಲಾಖೆ‌ ಪತ್ತೆ ಕಾರ್ಯದಲ್ಲಿ ತೊಡಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಕೆಯನ್ನು ಕರೆತರಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.

ಉಳ್ಳಾಲದ ಹಿಂದೂ ಮುಖಂಡ ಅರುಣ್ ಉಳ್ಳಾಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here