ವಯಸ್ಸಾದ ಹೆತ್ತವರ ಮೇಲೆ ಕ್ರೌರ್ಯ ಮೆರೆದ ಪುತ್ರ-ತಲೆಯ ಮೇಲೆ ಕಲ್ಲು ಎತ್ತಿಹಾಕಿ ತಂದೆಯ ಬರ್ಬರ ಹತ್ಯೆ

ಮಂಗಳೂರು(ಮಂಡ್ಯ): ಜಮೀನು ಮಾರಿದ ದುಡ್ಡು ಹಾಗೂ ಆಸ್ತಿಯ ವಿಚಾರಕ್ಕೆ ಸ್ವಂತ ತಂದೆಯನ್ನೇ ಪಾಪಿ ಮಗನೊಬ್ಬ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂಜಪ್ಪ(65) ಮಗನಿಂದಲೇ ಹತ್ಯೆಯಾದ ದುರ್ದೈವಿ ತಂದೆ. ಇನ್ನು ಮಗನ ಕ್ರೌರ್ಯಕ್ಕೆ ತಾಯಿ ಮಹದೇವಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹದೇವಮ್ಮ ಸ್ಥಿತಿ ಚಿಂತಾಜನಕವಾಗಿದೆ.

ಮೂಲತಃ ರಾಮನಗರ ಜಿಲ್ಲೆಯವರಾದ ನಂಜಪ್ಪ ಹಾಗೂ ಮಹದೇಮಮ್ಮ, ಹತ್ತು ವರ್ಷದ ಹಿಂದೆ ಸುಂಡಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ತಮಗೆ ಇದ್ದ ಜಮೀನನ್ನ 20 ಲಕ್ಷ ರೂ.ಗೆ ಮೂರು ತಿಂಗಳ ಹಿಂದೆ ಮಾರಾಟ ಮಾಡಿ, ಅದರಲ್ಲಿ ಮಗ ಮಹದೇವ್​ಗೆ ಮೂರು ಲಕ್ಷ ಹಾಗೂ ಇನ್ನೊಬ್ಬಳು ಮಗಳಿಗೆ ಮೂರು ಲಕ್ಷ ಕೊಟ್ಟು, ಉಳಿದ ಹಣವನ್ನ ತಮ್ಮ ಅಕೌಂಟ್​ಗೆ ಹಾಕಿಕೊಂಡಿದ್ದರು. ಇದರ ಜೊತೆಗೆ ಸುಂಡಹಳ್ಳಿ ಗ್ರಾಮದಲ್ಲಿ ಇದ್ದ ಮೂರು ಗುಂಟೆ ಜಮೀನನ್ನ ಮಗಳ ಹೆಸರಿಗೆ ಬರೆಯಲು ಸಹ ಮುಂದಾಗಿದ್ದರು. ಇದರಿಂದ ಕುಪಿತನಾಗಿದ್ದ ಆರೋಪಿ ಮಹದೇವ್, ಬ್ಯಾಂಕ್​ನಲ್ಲಿ ಇರುವ ಹಣವನ್ನ ಕೊಡುವಂತೆ ಪದೇ ಪದೇ ಪೀಡಿಸುತ್ತಿದ್ದ.

ಬಿಡದಿಯಲ್ಲಿ ವಾಸವಾಗಿದ್ದ ಈತ ಫೆ.26ರ ರಾತ್ರಿ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆ. ಬಾಗಿಲು ತೆಗೆಯದೇ ಇದ್ದಿದ್ದಕ್ಕೆ ಕಿಟಿಕಿ ಗ್ಲಾಸ್​ಗಳನ್ನ ಒಡೆದು ಹಾಕಿ ನಂತರ ಏಣಿ ಹಾಕಿ ಮನೆಯ ಶೀಟ್​ಗಳ ಮೇಲೆ ಹತ್ತಿ, ಶೀಟ್ ಮುರಿದು ಒಳಗೆ ಹೋಗಿದ್ದಾನೆ. ಆ ನಂತರ ಮನೆಯಿಂದ ಹೊರಗೆ ಬಂದ ತಂದೆ ಹಾಗೂ ತಾಯಿಯನ್ನ ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಮನಸ್ಸೋ ಇಚ್ಛೆ ಹೊಡೆದಿದ್ದಾನೆ. ಬಳಿಕ ಕಲ್ಲು ತೆಗೆದುಕೊಂಡು ತಂದೆ ನಂಜಪ್ಪ ತಲೆಯ ಮೇಲೆ ಹಾಕಿದ್ದಾನೆ. ಹೀಗಾಗಿ ನಂಜಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ತಾಯಿ ಮಹದೇವಮ್ಮ ಮೇಲೂ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬೆಳಗಿನ ಜಾವ ಮೃತದೇಹವನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಮಹಾದೇವ್​ ಮೊದಲ ಹೆಂಡತಿ ಸತ್ತ ನಂತರ ಎರಡನೇ ಮದುವೆಯಾಗಿ ಆಕೆಯ ಜೊತೆ ರಾಮನಗರದ ಬಿಡದಿಯಲ್ಲಿ ವಾಸವಾಗಿದ್ದ. ಮಂಡ್ಯ ಗ್ರಾಮಾಂತರ ಠಾಣೆಯ ಎಮ್​ಒಬಿ ಆಗಿರುವ ಇತ, ಹಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದಾನೆ. ಜಮೀನು ಮಾರಿದ ದುಡ್ಡಿಗಾಗಿ ಪದೇ ಪದೇ ಹೆತ್ತ ತಂದೆ-ತಾಯಿ ಕಿರುಕುಳ ನೀಡುತ್ತಾ, ತನ್ನ ಅಕ್ಕನಿಗೆ ಜಮೀನು ಬರೆಯದಂತೆ ಸಾಕಷ್ಟು ಒತ್ತಡ ಕೂಡ ಹಾಕುತ್ತಿದ್ದ. ಆದರೆ, ನಿನ್ನೆ ರಾತ್ರಿ ತನ್ನ ಹೆಂಡತಿ ಜೊತೆ ಕುಡಿದುಕೊಂಡು ಬಂದಿದ್ದ ಆರೋಪಿ ಮಹದೇವ. ತನ್ನ ತಂದೆಯ ಜೀವ ತೆಗೆದು, ತಾಯಿಯ ಮೇಲೆ ಕ್ರೌರ್ಯ ಮೆರೆದು ಎಸ್ಕೇಪ್ ಆಗಿದ್ದಾನೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವಯಸ್ಸಾದ ಸಮಯದಲ್ಲಿ ತಂದೆ-ತಾಯಿಗೆ ಆಸರೆಯಾಗಿ ಇರಬೇಕಾಗಿದ್ದ ಮಗ ಹಣದಾಸೆಗೆ ತಂದೆಯ ಕಥೆಯನ್ನೇ ಮುಗಿಸಿದ್ದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here