ಮಂಗಳೂರು(ದಾವಣಗೆರೆ): ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ಮಾತಿದೆ. ಆದರೆ ಸಾಲದಿಂದ ಮಾನವೀಯತೆ ಕಳೆದುಕೊಂಡರೆ ಹೇಗೆ? ಅಂತಹದೊಂದು ಕಣ್ಣೀರ ಕತೆ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಸಾಲ ಕಟ್ಟಿಲ್ಲ ಎಂದು ನೋಟೀಸ್ ನೀಡೋದನ್ನು ಕೇಳಿರಬಹುದು. ಅಥವಾ ಅದಕ್ಕೆ ಜಾಮೀನು ನೀಡಿದವರನ್ನು ವಿಚಾರಿಸಿರೋದನ್ನ ಕೇಳಿರಬಹುದು. ಆದರೆ ಸಾಲದ ಕಂತು ಕಟ್ಟಿಲ್ಲ ಎಂದು ಒಂದೂವರೆ ತಿಂಗಳ ಬಾಣಂತಿಯನ್ನು ಫೈನಾನ್ಸ್ ಸಿಬ್ಬಂದಿ ಕರೆತಂದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬೆಲ್ ಸ್ಟಾರ್ ಫೈನಾನ್ಸ್ ಈ ಕೃತ್ಯವೆಸಗಿದೆ. ಬಾಣಂತಿ ಆಫೀಸ್ ಗೆ ಕರೆ ತಂದು ಬೆಲ್ ಸ್ಟಾರ್ ಫೈನಾನ್ಸ್ನವರು ಸಾಲ ಕಟ್ಟುವಂತೆ ಒತ್ತಾಯಿಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ಆಫೀಸ್ ನಲ್ಲಿ ಕೂರಿಸಿ ಹಣ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಮಗುವನ್ನ ಕಂಕುಳಲ್ಲಿಟ್ಟುಕೊಂಡು ತಾಯಿ ಕೆಲ ಹೊತ್ತುಗಳ ಕಾಲ ಬ್ಯಾಂಕಿನಲ್ಲೇ ಕಾಲ ಕಳೆದಿದ್ದಾರೆ.
ಬೆಲ್ ಸ್ಟಾರ್ ಫೈನಾನ್ಸ್ ಈ ಕೃತ್ಯ ಕಂಡು ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸೊರಟೂರ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೂವರೆ ತಿಂಗಳ ಗರ್ಭಿಣಿಗೆ ಆಗುತ್ತಿರುವ ಅನ್ಯಾಯವನ್ನು ಕೇಳಿ ತಕ್ಷಣವೇ ಸ್ಥಳಕ್ಕೆ ಪೊಲೀಸರು, ತಾಲೂಕು ಸಿಡಿಪಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬ್ಯಾಂಕ್ ಸಿಬ್ಬಂದಿಗೆ ಬುದ್ದಿ ಹೇಳಿ ಪೊಲೀಸರು ಬಾಣಂತಿಯನ್ನು ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಇತ್ತ ಮಾನವೀಯತೆಯನ್ನು ಮರೆತು ಅಮಾನವೀಯವಾಗಿ ವರ್ತಿಸಿದ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಹೊನ್ನಾಳಿ ತಾಲೂಕಿನ ಎಚ್ ಕಡದಕಟ್ಟೆ ಗ್ರಾಮದ ಧರ್ಮರಾಜ್ ಮತ್ತು ಮಮತಾ ದಂಪತಿ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತಿದ್ದರು. ಪತಿ ಧರ್ಮರಾಜ್ ಬೆಲ್ ಸ್ಟಾರ್ ಫೈನಾನ್ಸ್ ನಲ್ಲಿ 80 ಸಾವಿರ ಸಾಲ ಮಾಡಿದ್ದನು. ಪ್ರತಿ ತಿಂಗಳು ಫೈನಾನ್ಸ್ ಗೆ 4500 ರೂಪಾಯಿ ಕಂತು ಕಟ್ಟುತಿದ್ದನು. 4 ತಿಂಗಳು ಟೈಮ್ ಸರಿಯಾಗಿ ಕಂತು ಕಟ್ಟಿದ್ದನು. ಆದರೆ ಕಳೆದ 15 ದಿನಗಳಿಂದ 5 ನೇ ಕಂತಿನ ಹಣ ಕಟ್ಟಿಲ್ಲ ಅಂತ ಫೈನಾನ್ಸ್ ಸಿಬ್ಬಂದಿ ಬಾಣಂತಿಯನ್ನು ತಂದು ಕಚೇರಿಯಲ್ಲಿ ಕೂರಿಸಿದ್ದಾರೆ. ಅತ್ತ ಮಮತಾ ಪತಿ ಧರ್ಮರಾಜ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಗಂಡ ನಾಪತ್ತೆಯಾಗಿರುವುದರ ನಡುವೆ ಫೈನಾನ್ಸ್ ಸಿಬ್ಬಂದಿ ಕುಟುಂಬವನ್ನು ನಡೆಸಿಕೊಂಡ ರೀತಿ ಬಡ್ಡಿ ವ್ಯವಹಾರ ನಡೆಸುವವರ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ.