ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ-ಜಮೀನು ವಿಷಯಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ

ಮಂಗಳೂರು(ಬೆಳಗಾವಿ): ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಒತ್ತುವರಿಯಾದ ಜಾಗ

ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ,‌ ಮಾಯಪ್ಪ ಹಳ್ಯಾಳ ಎಂಬುವವರು ಸರಕಾರಿ ರಸ್ತೆ ಮತ್ತು ಸರಕಾರ ಬಡವರಿಗಾಗಿ ಹಂಚಿಕೆ ಮಾಡಿದ್ದ ಜಮೀನನ್ನು ‌ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಬಡ ಮಹಿಳೆ ಪ್ರಶ್ನೆ ಮಾಡಿದ್ದು ಆರೋಪಿಗಳು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ಮಾತ್ರವಲ್ಲದೆ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ರಾಮಪ್ಪ ಭೀಮಪ್ಪ ನಾಗನೂರ ಎಂಬುವವರಿಗೆ 1991ರಲ್ಲಿ ಸರಕಾರದಿಂದ ಮೂರು ಎಕರೆ ಜಮೀನು ಮಂಜೂರಾಗಿತ್ತು. ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ರಾಮಪ್ಪ ನಾಗನೂರು ಜೀವನ ನಡೆಸುತ್ತಿದ್ದರು. ಇದರ ಮೇಲೆ ಕಣ್ಣು ಹಾಕಿದ ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ,‌ ಮಾಯಪ್ಪ ಹಳ್ಯಾಳ ಎಂಬುವವರು ರಾಮಪ್ಪಗೆ ಸೇರಿದ ಜಮೀನಿನ‌ 20 ಗುಂಟೆ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಮಗೆ ರಾಜಕೀಯ ‌ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ರಾಮಪ್ಪ ನಾಗನೂರಗೆ ಮಂಜೂರಾದ ಜಮೀನು ಜೊತೆಗೆ ರಸ್ತೆಗೆ ಮೀಸಲಿಟ್ಟ ‌ಜಾಗವೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿ ಪ್ರಶ್ನಿಸಲು ಹೋಗಿದ್ದ ರಾಮಪ್ಪ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ಸೀರೆ ಕಳಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೇ ಜಯಶ್ರೀ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸಂತ್ರಸ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here