ಮಂಗಳೂರು : ಪಕ್ಷಕ್ಕೆ ಎದಯರಾಳಿಯ ಪ್ರಶ್ನೆಯೇ ಇಲ್ಲ. ಇದು ಪ್ರಜಾಪ್ರಭುತ್ವ, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಪ್ರತೀ ಚುನಾವಣೆ ಬಂದಾಗ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆ ಎಂದು ಹೇಳಿರುವ ಸಂಸದ ನಳಿನ್ ಕುಮಾರ್ ಕಟೀಲ್ ಮುಂಬರುವ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವುದಾಗಿ ಪುತ್ತಿಲ ಪರಿವಾರ ಫೆ.29 ರಂದು ಅಧಿಕೃತವಾಗಿ ಘೋಷಿಸಿದ್ದು, ಇದಕ್ಕೆ ಸಂಸದ, ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ನಳಿನ್ ಕುಮಾರ್ ಕಟೀಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಪುತ್ತಿಲ ಪರಿವಾರ ಒಂದು ಸ್ವತಂತ್ರ ಸಂಸ್ಥೆ. ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ. ಅವರ ಮನವೊಲಿಕೆಗೆ ಪಕ್ಷ ಪ್ರಯತ್ನ ಮಾಡಿದೆ. ಭಾಜಪ ಬಹಳ ವರ್ಷಗಳ ಹೋರಾಟದಿಂದ ಅತೀ ದೊಡ್ಡ ಪಾರ್ಟಿಯಾಗಿ ಬೆಳೆದಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ್ನು ಎದುರಿಸಿ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದಿದೆ ಎಂದು ಹೇಳಿದ ಕಟೀಲ್, ರಾಮಮಂದಿರ ನಿರ್ಮಾಣವಾದ ಬಳಿಕ ಬಿಜೆಪಿ ಪರವಾದ ವಾತಾವರಣ ಅದ್ಭುತವಾಗಿದೆ. ಹಿಂದುತ್ವ, ರಾಷ್ಟ್ರವಾದ, ಅಭಿವೃದ್ಧಿ ವಿಚಾರವಾಗಿ ಜನ ಒಗ್ಗಟ್ಟಾಗುತ್ತಾರೆ. ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ. ಆಗಿನ ವಿಚಾರವೇ ಬೇರೆ, ಈಗಿನ ವಿಚಾರವೇ ಬೇರೆ. ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಪಡೆಯುತ್ತದೆ ಎಂದು ಪುತ್ತಿಲ ಪರಿವಾರದ ಹೆಸರೆತ್ತದೆ ಕಟೀಲ್ ಹೇಳಿದ್ದಾರೆ. ಕೊನೆಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಸೀಟ್ ಕೋಡೊದು ಬಿಡೋದು ರಾಷ್ಟ್ರೀಯ ನಾಯಕರು ತೀರ್ಮಾನ. ಆ ತೀರ್ಮಾನಕ್ಕೆ ಕಾರ್ಯಕರ್ತನಾಗಿ ಬದ್ಧನಾಗಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ