ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಇನ್ನಿಲ್ಲ

ಮಂಗಳೂರು(ಬೆಂಗಳೂರು): ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಜಕಾರಣಿ ಹಾಗೂ ಮಾಜಿ ಐಎಎಸ್ ಅಧಿಕಾರಿ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ ಶಿವರಾಮ್ ಇಂದು(ಫೆ.29) ನಿಧನರಾಗಿದ್ದಾರೆ.

ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಮ್ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಏಪ್ರಿಲ್ 6, 1953 ರಂದು ಜನಸಿದ ಕೆ. ಶಿವರಾಮು 1985 ರಲ್ಲಿ ಕೆಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಆ ಬಳಿಕ ಕನ್ನಡ ಭಾಷೆಯಲ್ಲಿ ಐಎಎಸ್‌ ಪರೀಕ್ಷೆ ಬರೆದು, ತೇರ್ಗಡೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1993 ರಲ್ಲಿ ತೆರೆಗೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕೆ.ಶಿವರಾಮ್ ಕಾಲಿಟ್ಟಿದ್ದರು. ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ಟೈಗರ್’ ಮುಂತಾದ ಕನ್ನಡ ಚಿತ್ರಗಳಲ್ಲಿ ಕೆ.ಶಿವರಾಮ್ ಅಭಿನಯಿಸಿದ್ದಾರೆ.

2013 ರಲ್ಲಿ ಐಎಎಸ್ ನಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ಕೆ.ಶಿವರಾಮ್, 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದ್ದರು. ಛಲವಾದಿ ಮಹಾಸಭಾ ಅಧ್ಯಕ್ಷರಾಗಿದ್ದ ಅವರು ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು.

LEAVE A REPLY

Please enter your comment!
Please enter your name here