ಆಟೋ ಪಲ್ಟಿ-ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಮೃತ್ಯು

ಮಂಗಳೂರು(ಸುಬ್ರಹ್ಮಣ್ಯ): ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯದಲ್ಲಿ ಮಾ.3ರಂದು ರಾತ್ರಿ ಸಂಭವಿಸಿದೆ.

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಮೃತರು. ವಿವೇಕಾನಂದ ಅವರು ಮಾ.3 ರಾತ್ರಿ 9 ಗಂಟೆ ಸುಮಾರಿಗೆ ಸುಬ್ರಹ್ಮಣ್ಯದ ಇಂಜಾಡಿ ಬಳಿ ಆಟೋದಲ್ಲಿ ಹೋಗುತ್ತಿರುವಾಗ ರಕ್ತದೊತ್ತಡ ಕಡಿಮೆಯಾಗಿ ರಿಕ್ಷಾ ರಸ್ತೆ ಬದಿ ಚಲಿಸಿ ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ವಿವೇಕಾನಂದ ಅವರನ್ನು ಸುಬ್ರಹ್ಮಣ್ಯದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ, ಬಳಿಕ ಕಡಬದ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತರಾಗಿದ್ದರು. ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಸಮರ್ಪಕ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇದ್ದು ಇದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here