ಮಂಗಳೂರು: ಹಿಂದೆ ಭಯೋತ್ಪಾದಕರಿಗೆ ಸರ್ಕಾರದ ಬಗ್ಗೆ ಹೆದರಿಕೆ ಇತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ತಮ್ಮ ಬಗ್ಗೆ ಸಹಾನೂಭೂತಿ ಹೊಂದಿದೆ ಎಂಬುದು ಅವರಿಗೆ ಮನದಟ್ಟಾಗಿದೆ. ಅವರಿಗೆ ಸರ್ಕಾರದ ಬಗ್ಗೆ ಯಾವುದೇ ಹೆದರಿಕೆ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನ ರಾಮೇಶ್ವರ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಬಂಧಿಸಲು ಸರ್ಕಾರಕ್ಕೆ ತರಾತುರಿ ಇದ್ದಂತೆ ತೋರುತ್ತಿಲ್ಲ. ಈ ಘಟನೆಯ ಬಳಿಕ ಗ್ರಾಹಕರು ಯಾವುದೇ ಹೋಟೆಲ್‌ಗೆ, ಮಾರುಕಟ್ಟೆಗೆ ಹೋಗುವುದಕ್ಕೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಜನರು ಅಭದ್ರತೆ ಎದುರಿಸುತ್ತಿದ್ದಾರೆ. ಭಯೋತ್ಪಾದಕರು ಮಾತ್ರ ಸರ್ಕಾರ ನಮ್ಮನ್ನು ಮುಟ್ಟುವುದಿಲ್ಲ ಎಂದು ನಿರ್ಭೀತಿಯಿಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಸರ್ಕಾರ ಹೇಳಿತ್ತು. ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗುವುದರಿಂದ, ಖಾಸಗಿ ಹೋಟೆಲ್‌ನಲ್ಲಿ ರಾಜಾರೋಷವಾಗಿ ಬಾಂಬ್ ಇಡುವುದರಿಂದ ಇದು ಸಾಧ್ಯವಾಗುತ್ತದೆಯೇ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ, ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಕಾರ್ಯಕರ್ತರು ಅಹವಾಲು ಹೇಳಿಕೊಳ್ಳುವುದು ತಪ್ಪಲ್ಲ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಯಕತ್ವ ಟಿಕೆಟ್ ಹಂಚಿಕೆ ಬಗ್ಗೆ ಅಂತಿಮ ತಿರ್ಮಾನ ತೆಗೆದುಕೊಳ್ಳುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್, ಮಾಧ್ಯಮ ಸಂಚಾಲಕರಾದ ಮನೋಹರ ಕದ್ರಿ, ವಸಂತ್ ಜೆ.ಪೂಜಾರಿ ಭಾಗವಹಿಸಿದ್ದರು.