ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ 8 ತಿಂಗಳಲ್ಲಿಯೇ ಎಲ್ಲಾ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿ ಕೊಟ್ಟ ಮಾತಿನಂತೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.7ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭ ಐದು ಗ್ಯಾರಂಟಿ ಯನ್ನು ಕಾಂಗ್ರೆಸ್ ನೀಡಿತ್ತು. ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ನಾಲ್ಕು ಗ್ಯಾರಂಟಿ ಯನ್ನು ಅನುಷ್ಠಾನಗೊಳಿಸಿದೆ. ಅದೇರೀತಿ ಐದನೇ ಯೋಜನೆಯಾದ ಯುವನಿಧಿಯೂ ಈಗ ಅನುಷ್ಠಾನವಾಗಿದ್ದು, ಸರಕಾರ ತನ್ನ ಮಾತು ಉಳಿಸಿಕೊಂಡಿದೆ. ಸಿಎಂ ನುಡಿದಂತೆ ನಡೆದಿದ್ದಾರೆ ಎಂದರು. ಶಕ್ತಿ ಯೋಜನೆಯಿಂದಾಗಿ ರಾಜ್ಯದ ಎಲ್ಲಾ ವರ್ಗದ ಜನತೆಗೆ ಪ್ರಯೋಜನವಾಗಿದೆ. ಮಹಿಳೆಯರು ಹರ್ಷದಿಂದ ಸರಕಾರಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಲಾಭವಾಗಿದೆ. ಗೃಹ ಜ್ಯೋತಿ ಯೋಜನೆ ಕೂಡ ಯಶಸ್ವಿಯಾಗಿದ್ದು, ಜನತೆ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹರೀಶ್ ಕುಮಾರ್ ಯೋಜನೆಗಳ ವಿವರ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅದ್ಯಕ್ಷತೆ ವಹಿಸಿದ್ದರು. ಮೆಸ್ಕಾಂ ಎಂಡಿ ಪದ್ಮಾವತಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್, ಗೇರು ಅಭಿವೃದ್ಧಿ ನಿಗಮದ ಅದ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಾರ್ಪೋರೇಟರ್ ಗಳಾದ ಶಶಿಧರ ಹೆಗ್ಡೆ,.ಎ.ಸಿ.ವಿನಯರಾಜ್, ಅನಿಲ್ ಕುಮಾರ್ , ಭಾಸ್ಕರ ಮೊಯಿಲಿ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಫಲಾನುಭವಿಗಳ ವಿವರ ನೀಡಿದರು. ಮಂಗಳೂರು ತಾಲೂಕಿನಲ್ಲಿ 3524 ಮಂದಿ ಅಂತ್ಯೋದಯ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ. 42,642 ಮಂದಿ ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ತಾಲೂಕಿನಲ್ಲಿ ಗೃಹ ಲಕ್ಷ್ಮಿ ಯೋಜನೆ 77,573 ಮಂದಿಗೆ ತಲುಪಿದ್ದು, 1,41,873 ಮನೆಗಳಿಗೆ ಗೃಹ ಜ್ಯೋತಿ ತಲುಪಿದೆ ಎಂದು ಮಹೇಶ್ ಕುಮಾರ್ ಮಾಹಿತಿ ನೀಡಿದರು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಲಕು ತಮ್ಮ ಅನಿಸಿಕೆ ಹಂಚಿಕೊಂಡರು. ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಸ್ವಾಗತಿಸಿದರು.