ಮಾ.9,10 ರಂದು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್

ಮಂಗಳೂರು: ರಾಯಲ್ ಬಂಟ್ಸ್ ಕುಡ್ಲ ಸಂಘಟನೆ ಆಯೋಜಿಸಿರುವ ಬಂಟ್ಸ್ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮಾ.9 ಮತ್ತು 10ರಂದು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಹೊನಲು ಬೆಳಕಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ 10 ಫ್ಯಾಂಚೈಸಿಗಳು ಪಾಲ್ಗೊಳ್ಳುತ್ತಿದ್ದು ವಿಜೇತ ತಂಡಕ್ಕೆ ₹ 2.5 ಲಕ್ಷ, ರನ್ನರ್ ಅಪ್‌ ತಂಡಕ್ಕೆ ₹ 1.5 ಲಕ್ಷ ಮತ್ತು ಮೂರನೇ ಸ್ಥಾನ ಗಳಿಸಿದ ತಂಡಕ್ಕೆ ₹ 55,555 ನೀಡಲಾಗುವುದು ಎಂದು ಆಯೋಜನಾ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಶೆಟ್ಟಿ ಮಾ.7ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 8 ಓವರ್‌ಗಳ ಪಂದ್ಯಗಳಲ್ಲಿ ಆಡುವ ಪ್ರತಿ ತಂಡದಲ್ಲಿ ಇಬ್ಬರು ಐಕಾನ್ ಮತ್ತು 10 ಲೆಜೆಂಟ್ ಆಟಗಾರರು ಒಳಗೊಂಡ 15 ಮಂದಿ ಇರುತ್ತಾರೆ. ಮಂಗಳೂರಿನ 4, ಬೆಂಗಳೂರು, ಪುತ್ತೂರು, ಉಡುಪಿ, ಮುಂಬೈಯಿಂದ ತಲಾ ಒಂದು ಕುಂದಾಪುರದಿಂದ 2 ತಂಡಗಳು ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.

9ರಂದು ಬೆಳಿಗ್ಗೆ 9 ಗಂಟೆಗೆ ಟೂರ್ನಿಯನ್ನು ಶಾಸಕ ಮಂಜುನಾಥ ಭಂಡಾರಿ ಮತ್ತು ಅಡ್ಯಾರ್ ಗಾರ್ಡನ್ ಮಾಲೀಕ ಕಿಶನ್ ಶೆಟ್ಟಿ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಎಂಆರ್‌ಜಿ ಗ್ರೂಪ್ಸ್‌ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಂಸದರು ಮತ್ತು ಶಾಸರು ಪಾಲ್ಗೊಳ್ಳಲಿದ್ದಾರೆ. 10ರಂದು ರಾತ್ರಿ 9 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ರಾಯಲ್ ಬಂಟ್ಸ್ ಸಂಸ್ಥೆ ಕ್ರೀಡಾ ಚಟುವಟಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲು ಮುಂದಾಗಿದ್ದು ನಗರದಲ್ಲಿ ಬಂಟ್ಸ್ ಸ್ಪೋರ್ಟ್ಸ್ ಅಕಾಡೆಮಿಯನ್ನು ಆರಂಭಿಸುವ ಉದ್ದೇಶ ಇದೆ ಎಂದು ಪ್ರಧಾನ ಕಾರ್ಯದರ್ಶಿ ಅಶ್ವತ್ಥಾಮ ಹೆಗ್ಡೆ ವಿವರಿಸಿದರು. ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಉಪಾಧ್ಯಕ್ಷ ಮನೀಷ್ ರೈ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಖಜಾಂಚಿ ಶಿವಪ್ರಸಾದ್ ಕಿಲ್ಲೆ ಮತ್ತು ಸಂಘಟನಾ ಕಾರ್ಯದರ್ಶಿ ಭೋಜರಾಜ್ ಶೆಟ್ಟಿ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here