ಬ್ಯಾರಿ ಅಭಿವೃದ್ಧಿ‌ ನಿಗಮ ಸ್ಥಾಪನೆಗೆ ಆಗ್ರಹ, ಸರಕಾರಕ್ಕೆ ಮನವಿ

ಮಂಗಳೂರು: ಬ್ಯಾರಿ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎಂದು ಅಖಿಲ ಭಾರತ ಬ್ಯಾರಿ ಮಹಾಸಭಾ ಆಗ್ರಹಿಸಿದೆ.

ಮಾ.7ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಬೈಕಂಪಾಡಿ, ‘ರಾಜ್ಯದ ವಿವಿಧ ಕಡೆ ಹಾಗೂ ಹೊರರಾಜ್ಯಗಳಲ್ಲಿ ಬ್ಯಾರಿ ಸಮುದಾಯಕ್ಕೆ ಸೇರಿದ 25 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಬ್ಯಾರಿಗಳಲ್ಲಿ ಹೆಚ್ಚಿನವರು ವ್ಯಾಪಾರ ವೃತ್ತಿಯಲ್ಲಿ ತೊಡಗಿದ್ದಾರೆ. ನಮ್ಮ ಸಮುದಾಯದಲ್ಲಿ ಕಡು ಬಡವರು ಗಣನೀಯ ಪ್ರಮಾಣದಲ್ಲಿದ್ದಾರೆ. ಧಾರ್ಮಿಕ ಕಾರಣಗಳಿಂದಾಗಿ ಶಿಕ್ಷಣ ವಂಚಿತರಾದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಬ್ಯಾರಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ, ವರ್ಷಕ್ಕೆ ₹200 ಕೋಟಿ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು. ‘ವಿಶ್ವಕರ್ಮ, ಲಿಂಗಾಯತ, ಮರಾಠ, ಕೊಡವ ಸಮುದಯಗಳಿಗೆ ಹಾಗೂ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸರ್ಕಾರ ಸ್ಥಾಪಿಸಿದೆ. ಬ್ಯಾರಿಗಳಿಗೆ ಪ್ರತ್ಯೇಕ ನಿಗಮ ಆರಂಭಿಸಿ ಅನುದಾನ ಒದಗಿಸಿದರೆ, ನಮ್ಮ ಸಮುದಾಯದ ಬಡವರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಹಕ್ಕೊತ್ತಾಯ ಮಂಡಿಸಲು ಅಖಿಲ ಭಾರತ ಮಟ್ಟದ ಬ್ಯಾರಿ ಸಮಾವೇಶವನ್ನು ಮುಂದಿನ ತಿಂಗಳು ಹಮ್ಮಿಕೊಳ್ಳುವ ಚಿಂತನೆ ಇದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿರುವ ₹ 3 ಸಾವಿರ ಕೋಟಿ ಅನುದಾನದಲ್ಲೇ ₹ 200 ಕೋಟಿಯನ್ನು ಬ್ಯಾರಿ ನಿಗಮಕ್ಕೆ ನೀಡಿ ಎಂಬುದು ನಮ್ಮ ಒತ್ತಾಯ’ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಸಂಚಾಲಕ ಮೊಹಮ್ಮದ್‌ ಶಾಕೀರ್‌, ಸದಸ್ಯರಾದ ಅಶ್ರಫ್‌ ಬದ್ರಿಯಾ, ಅಬ್ದುಲ್‌ ಜಲೀಲ್‌ ಕೃಷ್ಣಾಪುರ, ಇ.ಕೆ.ಹುಸೈನ್‌, ಮೊಹಮ್ಮದ್ ಹನೀಫ್‌ ಯು., ಅಬ್ದುಲ್ ಲತೀಫ್‌ ಬ್ಲೂಸ್ಟಾರ್‌, ಅಬ್ದುಲ್ ಖಾದರ್‌ ಇಡ್ಮಾ, ಹಮೀದ್‌ ಕಿನ್ಯಾ, ಬಾವ ಪದರಂಗಿ, ಮೊಹಮ್ಮದ್ ಸಾಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here