ಭಾರತ ಚೀನಾ ಮಧ್ಯೆ ಶೀಘ್ರ ಮತ್ತೊಂದು ಯುದ್ಧ ಸಾಧ್ಯತೆ-ಆತಂಕಕಾರಿ ವರದಿ ಬಹಿರಂಗ

ಮಂಗಳೂರು(ನವದೆಹಲಿ): ಭಾರತ ಮತ್ತು ಚೀನಾ ಮಧ್ಯೆ 2025ರಿಂದ 2030 ರ ನಡುವಣ ಅವಧಿಯಲ್ಲಿ ಯಾವಾಗ ಬೇಕಾದರೂ ಮತ್ತೊಂದು ಯುದ್ಧ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಬ್ರಿಟನ್​ ಸಂಸ್ಥೆಯೊಂದರ ವರದಿ ಸುಳಿವು ನೀಡಿದೆ. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ, ಜನರಲ್ ವಿಪಿ ಮಲಿಕ್ ಕೂಡ ಮತ್ತೊಂದು ಯುದ್ಧದ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಸೇನೆಯು ಸದಾ ಕಟ್ಟೆಚ್ಚರದಿಂದ ಇರಬೇಕು ಎಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಭಾರತ ಮತ್ತು ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ಮುಖಾಮುಖಿ ಎದುರಿಸುತ್ತಿವೆ. 2030 ರ ವೇಳೆಗೆ ಭಾರತ ಮತ್ತು ಚೀನಾ ನಡುವೆ ಯುದ್ಧ ಸಂಭವಿಸಬಹುದು ಎಂದು ಬ್ರಿಟನ್ ಮೂಲದ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ ಎಚ್ಚರಿಸಿದೆ. ಎರಡನೇ ಚೀನಾ-ಭಾರತ ಯುದ್ಧವು 2025 ಮತ್ತು 2030 ರ ನಡುವೆ ಪೂರ್ವ ಲಡಾಖ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ. ಯುದ್ಧವು ಯಾವಾಗ ಬೇಕಾದರೂ ಸಂಭವಿಸಬಹುದು. 1996 ರಲ್ಲಿ ಎಲ್​ಎಸಿ ಪ್ರದೇಶದಲ್ಲಿ ಶಾಂತಿಗಾಗಿ ನಾವು ಚೀನಾದೊಂದಿಗೆ ಸಹಿ ಮಾಡಿದ ಒಪ್ಪಂದವನ್ನು ಈಗಾಗಲೇ ಮುರಿದು ಹಾಕಲಾಗಿದೆ. ಚೀನಾ 2020 ರಲ್ಲಿ ಪೂರ್ವ ಲಡಾಖ್ ಸೆಕ್ಟರ್ ಮೇಲೆ ದಾಳಿ ಮಾಡಿದೆ. ಈಶಾನ್ಯದಲ್ಲಿ ಹಲವಾರು ಘರ್ಷಣೆಗಳು ನಡೆದಿವೆ. ಯುದ್ಧವು ಯಾವಾಗ ಬೇಕಾದರೂ ಸಂಭವಿಸಬಹುದು. ಹೀಗಾಗಿ ನಾವು ಜಾಗರೂಕರಾಗಿರಬೇಕು ಎಂದು ಮಲಿಕ್ ಹೇಳಿದ್ದಾರೆ.

ಚೀನಾದಿಂದ ಯುದ್ಧ ಬೆದರಿಕೆ ಇರುವ ಕಾರಣವೇ ಭಾರತ ಸರ್ಕಾರವು ಹಿಮಾಲಯದ ಗಡಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದೆ. ಗಡಿಯುದ್ದಕ್ಕೂ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ನಮ್ಮ ಕಾರ್ಯಾಚರಣೆಯ ಯೋಜನೆಯನ್ನು ಬದಲಾಯಿಸಿದೆ. ಮತ್ತು ಇದಕ್ಕೆ ಮೂಲಸೌಕರ್ಯವು ಸಂಪೂರ್ಣವಾಗಿ ಅವಶ್ಯಕವಾಗಿದೆ ಎಂದು ಜನರಲ್ ಮಲಿಕ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತವು ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಲು ಮತ್ತು ಗಡಿ ರಸ್ತೆಗಳ ನಿರ್ಮಾಣಕ್ಕೆ ಅನುದಾನವನ್ನು 10 ಪಟ್ಟು ಹೆಚ್ಚಿಸಿದೆ. ರಸ್ತೆಗಳು, ಸೇತುವೆಗಳು, ಸುರಂಗಗಳು ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಯುದ್ಧದ ಸಾಧ್ಯತೆಯ ಆಧಾರದ ಮೇಲೆಯೇ ತ್ವರಿತಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಗಡಿಯುದ್ದಕ್ಕೂ ಭಾರತದ ಆಯಕಟ್ಟಿನ ಪ್ರಮುಖ ಸ್ಥಳಗಳಿಗೆ ಪಡೆಗಳ ವೇಗದ ಚಲನೆಯನ್ನು ಖಚಿತಪಡಿಸುವುದು ಈ ಯೋಜನೆಗಳ ಗುರಿಯಾಗಿದೆ.

ಚೀನಾ ಗಡಿ ಪ್ರದೇಶದಲ್ಲಿ ಮಹತ್ವದ್ದೆನ್ನಲಾದ ಅರುಣಾಚಲ ಪ್ರದೇಶದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಇಂದು (ಮಾರ್ಚ್ 9) ಲೋಕಾರ್ಪಣೆಗೊಳಿಸಿದ್ದಾರೆ. ಈ ಸುರಂಗ ಮಾರ್ಗ ಅರುಣಾಚಲ ಪ್ರದೇಶದ ತವಾಂಗ್ ಅನ್ನು ಅಸ್ಸಾಂನೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಇದನ್ನು ಸುಮಾರು 825 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 13,000 ಅಡಿಗಳಷ್ಟು ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗವಾಗಿದೆ. ಸೆಲಾ ಸುರಂಗವು ಹಿಮಪಾತದಂಥ ಪ್ರತಿಕೂಲ ಹವಾಮಾನದ ಸಂದರ್ಭಗಳಲ್ಲಿ ಶೀಘ್ರ ಗಡಿ ಪ್ರದೇಶವನ್ನು ತಲುಪಲು ಸೇನೆಗೆ ಅನುವು ಮಾಡಿಕೊಡಲಿದೆ. ಗಡಿ ಪ್ರದೇಶಗಳಿಗೆ ಸೇನೆಯ ಸಂಪರ್ಕ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉದ್ದೇಶಿಸಿರುವ ಹಲವು ನಿರ್ಣಾಯಕ ಯೋಜನೆಗಳಲ್ಲಿ ಒಂದಾಗಿದೆ.

LEAVE A REPLY

Please enter your comment!
Please enter your name here