ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಚುನಾವಣಾ ಆಯುಕ್ತ ‘ಅರುಣ್ ಗೋಯಲ್’ ರಾಜೀನಾಮೆ-ರಾಜಕೀಯ ವಲಯದಲ್ಲಿ ಕುತೂಹಲ

ಮಂಗಳೂರು(ಬೆಂಗಳೂರು): 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಿಸುವ ಮುನ್ನವೇ, ಭಾರತದ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಮುಂದಿನವಾರ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿದೆ. ಇದರ ನಡುವೆಯೇ ಅರುಣ್ ಗೋಯಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಶ್ಚರ್ಯ ತಂದಿದೆ. ಮೂವರ ಸದಸ್ಯರ ಚುನಾವಣೆ ಆಯೋಗದಲ್ಲಿ ಒರ್ವ ಆಯುಕ್ತ ಅನುಪ್ ಚಂದ್ರ ಪಾಂಡೆ ಕಳೆದ ತಿಂಗಳು ನಿವೃತ್ತಿಯಾಗಿದ್ದಾರೆ. ಅವರ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ. ಈಗ ಅರುಣ್ ಗೋಯಾಲ್ ರಾಜಿನಾಮೆ ನೀಡಿದ್ದು, ಈಗ ರಾಜೀವ್ ಕುಮಾರ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮುಖ್ಯ ಚುನಾವಣೆ ಅಧಿಕಾರಿಯಾಗಿರುವ ಇವರು, 2025ರ ಫೆಬ್ರವರಿಯಲ್ಲಿ ನಿವೃತ್ತರಾಗಲಿದ್ದಾರೆ. ತ್ರಿಸದಸ್ಯ ಚುನಾವಣೆ ಆಯೋಗದಲ್ಲಿ ಈಗ ಕೇವಲ ಒರ್ವ ಆಯುಕ್ತರು ಮಾತ್ರ ಉಳಿದಿದ್ದಾರೆ. ಇಬ್ಬರು ಆಯುಕ್ತರಿಲ್ಲದೇ ಕೇವಲ ಒರ್ವ ಆಯುಕ್ತರನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಯ ದಿನಾಂಕ ಹಾಗೂ ಚುನಾವಣೆಯನ್ನು ಎದುರಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಗೋಯೆಲ್ ಆವರು 1985-ಬ್ಯಾಚ್ ಐಎಎಸ್ ಅಧಿಕಾರಿ. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ನಿವೃತ್ತಿ ಪಡೆದ ಒಂದೇ ದಿನಕ್ಕೆ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಅವರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರುಣ್ ಆಯ್ಕೆಯ ಬಗ್ಗೆ ಸುಪ್ರೀಂ ಕೂಡ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಸದ್ಯ ಈ ಪ್ರಕರಣವು ಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗ ರಾಜೀನಾಮೆ ಯಾಕೆ ಕೊಟ್ಟರು ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಅವರ ಸ್ಥಾನಕ್ಕೆ ಯಾರು ನೇಮಕವಾಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.

ಈ ಬೆಳವಣಿಗೆ ತೀವ್ರ ಕಳವಳಕಾರಿ ಎಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷ ಇದಕ್ಕೆ ತಾರ್ತಿಕ ವಿವರಣೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದೆ.

“ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದರೂ, ಭಾರತದಲ್ಲಿ ಇದೀಗ ಒಬ್ಬರು ಮಾತ್ರ ಚುನಾವಣಾ ಆಯುಕ್ತರು ಇದ್ದಾರೆ. ಏಕೆ? ನಾನು ಈ ಮೊದಲೇ ಹೇಳಿದಂತೆ, ಸ್ವತಂತ್ರ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದಮನಿಸುವುದನ್ನು ನಿಲ್ಲಿಸದಿದ್ದರೆ, ನಮ್ಮ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರತ್ವ ಜಾರಿಯಾಗುತ್ತದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.

ಪತನಗೊಂಡಿರುವ ಸಂವಿಧಾನಾತ್ಮಕ ಸಂಸ್ಥೆಗಳ ಪೈಕಿ ಚುನಾವಣಾ ಆಯೋಗ ಇತ್ತೀಚಿನದು ಎಂದು ಅವರು ಹೇಳಿದ್ದಾರೆ. “ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಹೊಸ ಪ್ರಕ್ರಿಯೆಯ ಎಲ್ಲಾ ಅಧಿಕಾರವನ್ನು ಆಡಳಿತ ಪಕ್ಷ ಮತ್ತು ಪ್ರಧಾನಿಗೆ ನೀಡಿದ್ದರೂ, ಅಧಿಕಾರಾವಧಿ ಮುಕ್ತಾಯವಾದ 23 ದಿನಗಳ ಬಳಿಕವೂ ಏಕೆ ನೇಮಕ ಮಾಡಿಲ್ಲ. ಮೋದಿಯವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ತಾರ್ಕಿಕ ವಿವರಣೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಕೂಡಾ ಈ ಬೆಳವಣಿಗೆಯನ್ನು ತೀರಾ ಕಳವಳಕಾರಿ ಎಂದು ಬಣ್ಣಿಸಿದ್ದಾರೆ.

LEAVE A REPLY

Please enter your comment!
Please enter your name here