ಉತ್ಖನನದ ವೇಳೆ 32 ಅಸ್ತಿ ಪಂಜರದ ಜೊತೆಗೆ ಬೃಹತ್ ಚಿನ್ನದ ಖಜಾನೆ ಪತ್ತೆ

ಮಂಗಳೂರು(ಅಮೆರಿಕಾ): ಕೇಂದ್ರ ಅಮೆರಿಕದ ಪನಾಮಾದಲ್ಲಿ 1200 ವರ್ಷಗಳಷ್ಟು ಹಳೆಯದಾದ ಗೋರಿಯೊಂದನ್ನು ಉತ್ಖನನ ಮಾಡುತ್ತಿದ್ದ ವೇಳೆ ಗೋರಿಯ ಒಳಗೆ ಚಿನ್ನದ ಖಜಾನೆ ಸಹಿತ, 32 ಮಂದಿಯ ಅಸ್ತಿ ಪಂಜರಗಳ ರಾಶಿಯೇ ದೊರಕಿದೆ. ಈ ದೃಶ್ಯ ಕಂಡ ಪುರಾತತ್ವ ಶಾಸ್ತ್ರಜ್ಞರು ಈ ಶವಗಳೆಲ್ಲವೂ ನರ ಬಲಿಯ ಪರಿಣಾಮ ಇರಬಹುದು ಎಂದು ಅಂದಾಜಿಸಿದ್ದಾರೆ.

ರಾಜಧಾನಿ ಪನಾಮಾ ಸಿಟಿಯಿಂದ ಸುಮಾರು 110 ಮೈಲು ದೂರದಲ್ಲಿರುವ ಎಲ್ ಕ್ಯಾನೊ ಆರ್ಕಿಯಲಾಜಿಕಲ್ ಪಾರ್ಕ್‌ನಲ್ಲಿ ಅಪಾರ ಪ್ರಮಾಣದ ನಿಧಿ ಹುದುಗಿರುವ ಸಮಾಧಿ ಪತ್ತೆಯಾಗಿದೆ. ಇದರಲ್ಲಿ ಚಿನ್ನದ ಶಾಲು, ಒಡ್ಯಾಣಗಳು, ಆಭರಣಗಳು ಮತ್ತು ತಿಮಿಂಗಿಲದ ಹಲ್ಲಿಗೆ ಅಲಂಕರಿಸಿದ ಕಿವಿಯೋಲೆಗಳು ಸೇರಿದಂತೆ ಬಹು ಅಮೂಲ್ಯವಾದ ವಸ್ತುಗಳು ದೊರಕಿವೆ. ಕೋಕಲ್ ಸಂಸ್ಕೃತಿಯ ಅತ್ಯುನ್ನತ ದರ್ಜೆಯ ಮುಖ್ಯಸ್ಥನ ಪಾರ್ಥಿವ ಶರೀರದೊಂದಿಗೆ ಈ ವಸ್ತುಗಳನ್ನು ಸಮಾಧಿಯಲ್ಲಿ ಹೂತುಹಾಕಿರಬಹುದು ಎಂದು ದಿ ಮೆಟ್ರೋ ಸುದ್ದಿ ಮಾಧ್ಯಮ ವರದಿ ಮಾಡಿದೆ. ಗೋರಿಯ ಒಳಗೆ 32 ವ್ಯಕ್ತಿಗಳ ಅಸ್ತಿ ಪಂಜರಗಳು ದೊರಕಿವೆ. ಕೋಕಲ್ ಸಂಸ್ಕೃತಿಯ ಮುಖ್ಯಸ್ಥನ ಸಾವಿನ ನಂತರದ ಜೀವನಕ್ಕೆ ಜತೆಗೂಡುವ ಸಲುವಾಗಿ ಇವರನ್ನು ಬಲಿ ನೀಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ. ಆದರೆ ನಿಜಕ್ಕೂ ಎಷ್ಟು ಜನರನ್ನು ಹೀಗೆ ಬಲಿ ಕೊಟ್ಟಿರಬಹುದು ಎಂಬುದನ್ನು ಪತ್ತೆ ಮಾಡಲು ಇನ್ನೂ ತನಿಖೆ ನಡೆಸಲಾಗುತ್ತಿದೆ. ಈ ಖಜಾನೆಯು ಲೆಕ್ಕಕ್ಕೆ ಸಿಗದಷ್ಟು ಅಮೂಲ್ಯ ಸಂಪತ್ತು ಹೊಂದಿದೆ ಎಂದು ಪನಾಮಾದ ಸಂಸ್ಕೃತಿ ಸಚಿವಾಲಯದ ಲಿನೆಟ್‌ ಮಾಂಟೆನೆಗ್ರೊ ತಿಳಿಸಿದ್ದಾರೆ.

ಈ ಗೋರಿಯನ್ನು ಕ್ರಿ.ಶ 750ರಲ್ಲಿ ಅತ್ಯುನ್ನತ ಶ್ರೇಣಿಯ ಪುರುಷ ನಾಯಕನ ಸಾವಿನ ಬಳಿಕ ನಿರ್ಮಿಸಲಾಗಿದೆ ಎಂದು ತಜ್ಞರು ಊಹಿಸಿದ್ದಾರೆ. ಆ ಕಾಲದಲ್ಲಿ ಗಣ್ಯರನ್ನು ಅವರ ಮಹಿಳಾ ಸಂಗಾತಿಯ ಮೇಲ್ಭಾಗದಲ್ಲಿ ಮುಖ ಕೆಳಗೆ ಮಾಡಿ ಹೂಳುವ ಸಂಸ್ಕೃತಿ ಇತ್ತು. ಇಲ್ಲಿ ಕೂಡ ಆ ಸಂಪ್ರದಾಯವನ್ನು ಪಾಲಿಸಲಾಗಿದೆ. “ಅತ್ಯುನ್ನತ ಶ್ರೇಣಿಯ ಜನರ ಜತೆಗೆ ವಿವಿಧ ಸಂಖ್ಯೆಯ ಜನರ ಹೆಣ ದಫನು ಮಾಡುವುದು ಏಕಕಾಲದಲ್ಲಿ ನಡೆಯುತ್ತದೆ. ಮುಖ್ಯಸ್ಥನ ಸಾವಿನ ನಂತರದ ಜೀವನಕ್ಕಾಗಿ ಆತನ ಜತೆಗಾರರಾಗಿ ಸಾಗಲು ಈ ಜನರನ್ನು ನರಬಲಿ ನೀಡಲಾಗಿರುತ್ತದೆ” ಎಂದು ಉತ್ಖನನ ವಿಭಾಗದ ನಿರ್ದೇಶಕಿ ಜೂಲಿಯಾ ಮಾಯೋ ತಿಳಿಸಿದ್ದಾರೆ

ಗೋರಿಯ ಒಳಗೆ ಬ್ರೇಸ್‌ಲೆಟ್‌ಗಳು, ಮಾನವ ಆಕೃತಿಯ ಕಿವಿಯೋಲೆ, ಮೊಸಳೆ ಕಿವಿಯೋಲೆ, ಗಂಟೆಗಳು, ನಾಯಿಯ ಹಲ್ಲುಗಳಿಂದ ಮಾಡಿದ ಸ್ಕರ್ಟ್, ಮೂಳೆಯ ಕೊಳಲುಗಳು ಮತ್ತು ಸೆರಾಮಿಕ್ ವಸ್ತುಗಳು ಕೂಡ ಕಂಡುಬಂದಿರುವುದಾಗಿ ಉತ್ಖನನದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎಲ್ ಕಾನೋದಲ್ಲಿ 2008ರಿಂದಲೂ ಉತ್ಖನನಗಳು ನಡೆಯುತ್ತಿವೆ. ಇಲ್ಲಿನ ಗೋರಿಗಳು ಐತಿಹಾಸಿಕ ಪ್ರಾಮುಖ್ಯದ ಹಾಗೂ ಸಾಂಸ್ಕೃತಿಕ ಅನ್ವೇಷಣೆಗಳು ಎಂದು ಪರಿಗಣಿಸಲಾಗುತ್ತದೆ. ಅಮೆರಿಕಕ್ಕೆ ಯುರೋಪಿಯನ್ನರ ಆಗಮನಕ್ಕೂ ಮುಂದೆ ಇದ್ದ ಸ್ಥಳೀಯ ಬುಡಕಟ್ಟುಗಳ ಜೀವನದ ಬಗ್ಗೆ ಇವು ಬೆಳಕು ಚೆಲ್ಲುತ್ತವೆ. ನೆಕ್ರೋಪೋಲಿಸ್ ಅಥವಾ ಸಿಟಿ ಆಫ್ ಡೆಡ್ ಎಂದು ಕರೆಯಲಾಗುವ ಈ ಸ್ಮಶಾನವನ್ನು ಕ್ರಿ.ಶ 700ರ ಸುಮಾರಿಗೆ ನಿರ್ಮಿಸಲಾಗಿದ್ದು, ಕ್ರಿ.ಶ 1000ದ ಬಳಿಕವೂ ಅನಾಥವಾಗಿದ್ದವು.

LEAVE A REPLY

Please enter your comment!
Please enter your name here