ಮಂಗಳೂರು(ಬೆಂಗಳೂರು): ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದಿನಿಂದ(ಮಾ.11) ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಗಳು ನಡೆಯಲಿವೆ. ಉತ್ತರ ಪತ್ರಿಕೆಗಳನ್ನು ಸರಕಾರವೇ ವಿದ್ಯಾರ್ಥಿಗಳಿಗೆ ಒದಗಿಸಲಿದೆ.
5ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಗರಿಷ್ಟ 40 ಅಂಕಗಳಿಗೆ ನಡೆಯಲಿವೆ. 8ನೇ ತರಗತಿಯ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಗರಿಷ್ಟ 50 ಅಂಕಗಳಿಗೆ ನಡೆಯಲಿವೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಪರೀಕ್ಷೆ ಮ.2.00ರಿಂದ ಸಂಜೆ 5.15ರವರೆಗೆ ಗರಿಷ್ಟ 100 ಅಂಕಗಳಿಗೆ ನಡೆಯಲಿದೆ. ಉಳಿದ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಗರಿಷ್ಟ 80 ಅಂಕಗಳಿಗೆ ನಡೆಯಲಿದೆ.
ವೇಳಾಪಟ್ಟಿ: 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.11ರಂದು ಪ್ರಥಮ ಭಾಷೆಯಾದ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷಾ ಪರೀಕ್ಷೆಗಳು ನಡೆಯಲಿವೆ. ಮಾ.12ರಂದು ದ್ವಿತೀಯ ಭಾಷೆಯಾದ ಇಂಗ್ಲೀಷ್ ಮತ್ತು ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ. ಮಾ.13ರಂದು ಕೋರ್ ವಿಷಯವಾದ ಪರಿಸರ ಅಧ್ಯಯನ ಪರೀಕ್ಷೆ ಮತ್ತು ಮಾ.14ರಂದು ಗಣಿತ ಪರೀಕ್ಷೆಗಳು ನಡೆಯಲಿವೆ. 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.11ರಂದು ಕನ್ನಡ, ಇಂಗ್ಲಿಷ್, ಇಂಗ್ಲಿಷ್(ಎನ್‍ಸಿಇಆರ್ ಟಿ), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮತ್ತು ಸಂಸ್ಕೃತ ಭಾಷಾ ಪರೀಕ್ಷೆಗಳು ನಡೆಯಲಿವೆ. ಮಾ.12ರಂದು ದ್ವಿತೀಯ ಭಾಷೆಯಾದ ಇಂಗ್ಲೀಷ್ ಮತ್ತು ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ. ಮಾ.13ರಂದು ತೃತೀಯ ಭಾಷೆಗಳಾದ ಹಿಂದಿ, ಹಿಂದಿ(ಎನ್‍ಸಿಇಆರ್ ಟಿ), ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು ಭಾಷಾ ಪರೀಕ್ಷೆಗಳು ನಡೆಯಲಿವೆ. ಮಾ.14ರಂದು ಗಣಿತ, ಮಾ.15ರಂದು ವಿಜ್ಞಾನ ಮತ್ತು ಮಾ.16ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಮಾ.18ರಂದು ದೈಹಿಕ ಶಿಕ್ಷಣ ಪರೀಕ್ಷೆ ನಡೆಯಲಿದೆ.