ಮಂಗಳೂರು(ಅಯೋಧ್ಯೆ): ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಪಾಂಗಾಳ ಪಾಂಡುರಂಗ ಶಾನುಭಾಗ್ (62) ಅವರು ಮಾ.10ರಂದು ಅಯೋಧ್ಯೆಯ ರಾಮಮಂದಿರದ ಬಳಿ ನಿಧನರಾಗಿದ್ದಾರೆ. ಪ್ರತಿಷ್ಠೆಯ ಮಂಡಲಪೂಜೆ ಸಮಾಪನ ಸಂದರ್ಭ ಮಾ.10ರ ಬೆಳಗ್ಗೆ ರಾಮನ ದರ್ಶನ ಪಡೆದು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂಸ್ಕೃತದಲ್ಲಿಯೇ ಮಾತನಾಡಿದ್ದರು. ಅಪರಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ದ್ವಾರದ ಬಳಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಿಧನ ಹೊಂದಿದ್ದಾರೆ.
ಶಾನುಭಾಗ್ ಅವರು ಅಂಧರಾಗಿದ್ದರೂ ಬಾಲ್ಯದಿಂದಲೂ ಆರೆಸ್ಸೆಸ್ ಸಂಪರ್ಕ ಹೊಂದಿ ಜಿಲ್ಲಾ ಬೌದ್ಧಿಕ್ ಪ್ರಮುಖ್ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಶ್ರೀರಾಮ ಮಂದಿರ ನಿರ್ಮಾಣ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು. ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ಪ್ರಧಾನ ಕಚೇರಿ, ಉಡುಪಿಯ ಕೆಥೋಲಿಕ್ ಸೆಂಟರ್ ಕಚೇರಿಗಳಲ್ಲಿ ಟೆಲಿಫೋನ್ ಆಪರೇಟರ್ ಮತ್ತು ಸಿಬಂದಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ರಾಮಾಯಣ, ಮಹಾಭಾರತದಲ್ಲಿ ಅಪಾರವಾದ ಪಾಂಡಿತ್ಯ ಹೊಂದಿದ್ದರು. ಚಿಂತಕರೂ ಆಗಿದ್ದ ಇವರ ನಿಧನಕ್ಕೆ ಪೇಜಾವರ ಶ್ರೀ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.