ಮಂಗಳೂರು: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ರು ಮೂವರು ಅಂತರಾಜ್ಯ ಕಳ್ಳರನ್ನು ಬಂಧಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಗೂಡಿನ ಬಳಿ ಜುಮ್ಮಾ ಮಸೀದಿ ಹತ್ತಿರದ ನಿವಾಸಿ ಮಹಮ್ಮದ್ ರಫೀಕ್ ಯಾನೆ ಗೂಡಿನ ಬಳಿ ರಫೀಕ್(35), ಮಂಜೇಶ್ವರ ತಾಲೂಕಿನ ಉಪ್ಪಳ ಮೊಗ್ರಾಳದ ಬಿಂಗಿನಾನಿ ಮನೆ ನಿವಾಸಿ ಇಬ್ರಾಹಿಂ ಕಲಂದರ್(41), ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ಮನೆ ನಿವಾಸಿ ದಯಾನಂದ ಎಸ್(37) ಎಂಬವರನ್ನು ಮಾ.10ರಂದು ಬಂಧಿಸಲಾಗಿದೆ. ಬಂಧಿತರಿಂದ 2,40,700/- ರೂ ನಗದು, ಕಳ್ಳತನದ ಹಣದಿಂದ ಖರೀದಿಸಿದ 2 ಲಕ್ಷ ರೂ ಮೌಲ್ಯದ ಗೃಹೋಪಯೋಗಿ ಸಾಮಾಗ್ರಿಗಳು, 12,48,218/-ರೂ ಮೌಲ್ಯದ ಚಿನ್ನಾಭರಣ, ಕಳ್ಳತನಕ್ಕೆ ಉಪಯೋಗಿಸಿದ ಕೆಎ-01-ಎನ್ಜಿ-2227 ನೊಂದಣಿ ನಂಬ್ರದ ಬ್ರೀಝಾ ಕಾರು, ಗ್ಯಾಸ್ ಕಟರ್ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 25,70,918/- ರೂ ಎಂದು ಅಂದಾಜಿಸಲಾಗಿದೆ.
ಫೆ.7ರಂದು ಸಂಜೆ 06.00 ಗಂಟೆಯಿಂದ ಫೆ.8ರ ಬೆಳಿಗ್ಗಿನ 9.30 ವರೆಗಿನ ಅವಧಿಯಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನ ದಕ್ಷಿಣ ದಿಕ್ಕಿನ ಗೋಡೆಯಲ್ಲಿರುವ ಕಿಟಕಿಯ ಸರಳಗಳನ್ನು ಮುರಿದ ಕಳ್ಳರು ಒಳಪ್ರವೇಶಿಸಿ ಗ್ಯಾಸ್ ಕಟ್ಟರ್ನಿಂದ ಸ್ಟ್ರಾಂಗ್ ರೂಮಿನ ಬಾಗಿಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಾಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ. 25/2024 ಕಲಂ:457,380 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು.
ಆರೋಪಿ ಮಹಮ್ಮದ್ ರಫೀಕ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ -02, ವೇಣೂರು ಪೊಲೀಸ್ ಠಾಣೆಯಲ್ಲಿ -02, ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಳ್ಳಾಲ ಪೊಲೀಸ್ ಠಾಣೆಯಲ್ಲಿ -01, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ -01, ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ -04, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ-01, ಬೆಂಗಳೂರು ನಗರದ ವ್ಯಾಪ್ತಿಯಲ್ಲಿ -06, ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ -01, ಉಡುಪಿ ಜಿಲ್ಲೆಯಲ್ಲಿ-03, ವಿಟ್ಲ ಪೊಲೀಸ್ ಠಾಣೆಯಲ್ಲಿ -01 ಸೇರಿದಂತೆ ಒಟ್ಟು 23 ಪ್ರಕರಣಗಳು ದಾಖಲಾಗಿದೆ. ಇಬ್ರಾಹಿಂ ಕಲಂದರ್ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 02, ವಿಟ್ಲ ಪೊಲೀಸ್ ಠಾಣೆಯಲ್ಲಿ 03, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 01, ಮೂಡಬಿದ್ರೆ ಠಾಣೆಯಲ್ಲಿ 01 ಕೇರಳ ರಾಜ್ಯದ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ-01 ಸೇರಿದಂತೆ ಒಟ್ಟು-08 ಪ್ರಕರಣಗಳು ದಾಖಲಾಗಿರುತ್ತವೆ. ದಯಾನಂದ ಎಸ್. ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎನ್ ಎಂ ಹಾಗೂ ರಾಜೇಂದ್ರ ಡಿ ಎಸ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಹೆಚ್ ನೇತ್ರತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್, ಉದಯರವಿ, ಹರೀಶ್ ಕುಮಾರ್, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷೀತ್ ರೈ , ಪ್ರವೀಣ್ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ಜಗದೀಶ್ ಅತ್ತಾಜೆ, ಹೇಮರಾಜ್, ಅಶೋಕ್, ವಿವೇಕ್ ಕೆ., ಕುಮಾರ್ ಹೆಚ್.ಕೆ, ಸಂಪತ್, ದಿವಾಕರ್, ಸಂತೋಷ್ ,ಕುಮಾರ್ ಮಾಯಪ್ಪರವರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ತ್ವರಿತವಾಗಿ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.