ಮಂಗಳೂರು(ಹೊಸದಿಲ್ಲಿ): ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ ಕುರಿತ ಅಂಕಿ ಅಂಶಗಳಲ್ಲಿ ʼಲಾಟರಿ ಕಿಂಗ್ʼ ಕುಖ್ಯಾತಿಯ ಮಾರ್ಟಿನ್ ಸ್ಯಾಂಟಿಯಾಗೊನ ಲಾಟರಿ ಕಂಪನಿಯು ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರ ಎಂದು ಬಹಿರಂಗವಾಗಿದೆ.
ಚುನಾವಣಾ ಬಾಂಡ್ ಗಳ ಇತರ ಗಮನಾರ್ಹ ಖರೀದಿದಾರರಲ್ಲಿ ಹೈದರಾಬಾದ್ ಮೂಲದ ಮೂಲಸೌಕರ್ಯ ದೈತ್ಯ ಸಂಸ್ಥೆ ಮೇಘಾ ಇಂಜಿನಿಯರಿಂಗ್ & ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ರಿಲಯನ್ಸ್-ಸಂಯೋಜಿತ ಕಂಪನಿ ಕ್ವಿಕ್‌ಸಪ್ಲೈ ಚೈನ್, ವೇದಾಂತ ಮತ್ತು ಕೋಲ್ಕತ್ತಾ ಮೂಲದ ಸಂಜೀವ್ ಗೋಯೆಂಕಾ ಗ್ರೂಪ್ ನ ಅಂಗಸಂಸ್ಥೆ ಯೂ ಸೇರಿದೆ ಎಂದು ತಿಳಿದು ಬಂದಿದೆ. ಪ್ರಮುಖ ಲಾಟರಿ ದೈತ್ಯ ಸಂಸ್ಥೆಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಚುನಾವಣಾ ಬಾಂಡ್ ಗಳ ಅಗ್ರ ಖರೀದಿದಾರರಾಗಿ ಹೊರಹೊಮ್ಮಿದೆ . ಈ ಸಂಸ್ಥೆಯು 1,208 ಕೋಟಿ ರೂ. ಮೌಲ್ಯದ 1,208 ಬಾಂಡ್‌ಗಳನ್ನು ಖರೀದಿಸಿದೆ ಎಂದು ತಿಳಿದು ಬಂದಿದೆ. ‘ಲಾಟರಿ ಕಿಂಗ್’ ಮಾರ್ಟಿನ್ ಸಂಟಿಯಾಗೊ ಮಾಲಕತ್ವದ ಕಂಪೆನಿ 7,000 ಕೋಟಿ ವಹಿವಾಟು ಹೊಂದಿದೆ. ಫ್ಯೂಚರ್ ಗೇಮಿಂಗ್ ಕಂಪೆನಿಯ ಮೇಲೆ ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಚುನಾವಣಾ ಬಾಂಡ್ ಖರೀದಿಯಲ್ಲಿ ನಂತರದ ಸ್ಥಾನದಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮತ್ತು ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿಗಳಿದೆ. ಮೇಘಾ ಇಂಜಿನಿಯರಿಂಗ್ 1 ಕೋಟಿ ರೂ ಮೌಲ್ಯದ 966 ಬಾಂಡ್‌ಗಳನ್ನು ಖರೀದಿಸಿದೆ. ಈ ಬಾಂಡ್ ಗಳ ಒಟ್ಟು ಮೌಲ್ಯ ರೂ. 966 ಕೋಟಿ. ವೆಸ್ಟರ್ನ್ ಯುಪಿ ಪವರ್ ರೂ. 220 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿದೆ. ಅಂದರೆ ಮೇಘಾ ಇಂಜಿನಿಯರಿಂಗ್‌ನ ಒಟ್ಟು ಚುನಾವಣಾ ಬಾಂಡ್ ಖರೀದಿ ಮೌಲ್ಯ ರೂ.1,186 ಕೋಟಿ. ಹೈದರಾಬಾದ್ ಮೂಲದ ಮೇಘಾ ಸಮೂಹವು ಹಲವಾರು ಸರ್ಕಾರಿ ಯೋಜನೆಗಳನ್ನು ಪಡೆದುಕೊಂಡಿದೆ. ಪ್ರಮುಖವಾಗಿ ತೆಲಂಗಾಣದ 1.15 ಲಕ್ಷ ಕೋಟಿ ರೂ. ವೆಚ್ಚದ ಕಾಳೇಶ್ವರಂ ಏತ ನೀರಾವರಿ ಯೋಜನೆ, 14,400 ಕೋಟಿ ರೂ. ವೆಚ್ಚದ ಮಹಾರಾಷ್ಟ್ರದ ಥಾಣೆ-ಬೋರಿವಲಿ ಅವಳಿ ಸುರಂಗ ಯೋಜನೆಯೂ ಸೇರಿದೆ. ಮಹಾರಾಷ್ಟ್ರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್, ರೂ 410 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಈ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ತಪಸ್ ಮಿತ್ರ ಅವರು ರಿಲಯನ್ಸ್-ಸಂಯೋಜಿತ ಘಟಕಗಳಲ್ಲಿ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದಾರೆ. ಚುನಾವಣಾ ಬಾಂಡ್ ಗಳನ್ನು ಖರೀದಿಸಿದ ಇತರ ಖರೀದಿದಾರರಲ್ಲಿ ಹಲ್ದಿಯಾ ಎನರ್ಜಿ ಲಿಮಿಟೆಡ್, ವೇದಾಂತ ಲಿಮಿಟೆಡ್, ಮತ್ತು ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದೆ.
ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 1260 ಕಂಪನಿಗಳು ಹಾಗೂ ವ್ಯಕ್ತಿಗಳು 12,769 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದು, ಇದರಲ್ಲಿ ಅಗ್ರ 20 ಕಂಪನಿಗಳ ಪಾಲು 5945 ಕೋಟಿ ರೂಪಾಯಿ. ಅಂದರೆ ಒಟ್ಟು ಮೌಲ್ಯದ ಸುಮಾರು ಶೇಕಡ 50ರಷ್ಟು. ವೈಯಕ್ತಿಕ ದೇಣಿಗೆಯಲ್ಲಿ 45 ಕೋಟಿ ದೇಣಿಗೆ ನೀಡಿದ ಎನ್.ಎಸ್.ಮೊಹಾಂತಿ ಅತಿದೊಡ್ಡ ದಾನಿ. ಲಕ್ಷ್ಮಿ ನಿವಾಸ್ ಮಿತ್ತಲ್ 35 ಕೋಟಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮೀದಾಸ್ ವಲ್ಲಭದಾಸ್ ಅಸ್ಮಿತಾ ಮೆರ್ಚಾ (25), ಕೆ.ಆರ್.ರಾಜಾ ಜೆಟಿ (25), ರಾಹುಲ್ ಭಾಟಿಯಾ (20), ರಾಜೇಶ್ ಮನ್ನಾಲಾಲ್ ಅಗರ್ ವಾಲ್ (13), ಸುರೇಶ್ ಗುಪ್ತಾ, ರಾಜು ಕುಮಾರ್ ಶರ್ಮಾ, ರಾಹುಲ್ ಜಗನ್ನಾಥ್ ಜೋಶಿ, ಹಮೇಶ್ ರಾಹುಲ್ ಜೋಶಿ (ತಲಾ 10 ಕೋಟಿ), ಅನಿತಾ ಹೇಮಂತ್ ಶಾ (8 ಕೋಟಿ) ನಂತರದ ಸ್ಥಾನಗಳಲ್ಲಿದ್ದಾರೆ. ದೇಣಿಗೆ ನೀಡಿದ ಸುಮಾರು 500 ಕಂಪನಿಗಳ ಪೈಕಿ 28 ಕಂಪನಿಗಳು 2019ರ ಏಪ್ರಿಲ್ 12ರ ಬಳಿಕ ಸ್ಥಾಪನೆಯಾದ ಕಂಪನಿಗಳು. 20 ಅಗ್ರ ಖರೀದಿದಾರ ಕಂಪನಿಗಳ ಪೈಕಿ 13 ಕಂಪನಿಗಳ ಹಣಕಾಸು ಫಲಿತಾಂಶ ಲಭ್ಯವಿದ್ದು, ತಮ್ಮ ನಿವ್ವಳ ಲಾಭದ ಪ್ರಮಾಣಾನುಸಾರ ಈ ಕಂಪನಿಗಳು ಬಾಂಡ್ ಖರೀದಿಸಿವೆ.