ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್ ಗಳನ್ನು ಮತ ಎಣಿಕೆ ವೇಳೆ ಎಣಿಕೆ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಇವಿಎಂ ಬದಲಾಗಿ ಮತಪತ್ರಗಳನ್ನು ಬಳಸುವಂತೆ ಜನ ಒತ್ತಡ ತರುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಕಾಂಗ್ರೆಸ್ ಅಧ್ಯಕ್ಷರು ಮೇಲಿನಂತೆ ಉತ್ತರಿಸಿದರು. ಆರಂಭದಿಂದಲೂ ಇದು ನಮ್ಮ ಬೇಡಿಕೆಯಾಗಿತ್ತು. ನೀವು ಶೇಕಡ 100ರಷ್ಟು ವಿವಿಪ್ಯಾಟ್ ಎಣಿಕೆ ಮಾಡಬೇಕು. ಇದು ನಮ್ಮ ಆಗ್ರಹ ಎಂದು ಸ್ಪಷ್ಟಪಡಿಸಿದರು. ಕೇವಲ ಕೆಲವೇ ವಿವಿಪ್ಯಾಟ್ ಗಳನ್ನು ಎಣಿಕೆ ಮಾಡಲಾಗುತ್ತದೆ. ನಾವು ಎಲ್ಲಾ ವಿವಿಪ್ಯಾಟ್ ಎಣಿಕೆ ಮಾಡುವಂತೆ ಆಗ್ರಹಿಸುತ್ತಿದ್ದೇವೆ. ಇದು ತಿಳಿದುಕೊಳ್ಳಲು ಸುಲಭ ಹಾಗೂ ಇದಕ್ಕೆ ಹೆಚ್ಚಿನ ವೆಚ್ಚವೂ ಇಲ್ಲ ಎಂದು ಅಭಿಪ್ರಾಯಪಟ್ಟರು. ವಿವಿಪ್ಯಾಟ್ ಎನ್ನುವುದು ಇವಿಎಂ ಜತೆಗೆ ಇರುವ ಸ್ವತಂತ್ರ್ಯ ವ್ಯವಸ್ಥೆಯಾಗಿದ್ದು, ಇದು ಮತದಾರರು ತಾವು ಚಲಾಯಿಸಿದ ಮತವನ್ನು ಉದ್ದೇಶಿಸಿದಂತೆ ಚಲಾವಣೆಯಾಗಿದೆಯೇ ಎಂದು ದೃಢೀಕರಿಸಿಕೊಳ್ಳಲು ಅವಕಾಶ ನೀಡುತ್ತದೆ. ಮತ ಚಲಾಯಿಸಿದ ಸಂದರ್ಭದಲ್ಲಿ ಕ್ರಮಸಂಖ್ಯೆ, ಹೆಸರು ಮತ್ತು ಅಭ್ಯರ್ಥಿಯ ಚಿಹ್ನೆಯನ್ನು ಹೊಂದಿರುವ ಮುದ್ರಿತ ಪ್ರತಿಯು ಪಾರದರ್ಶಕ ಗವಾಕ್ಷಿಯಲ್ಲಿ ಏಳು ಸೆಕೆಂಡ್‍ಗಳ ಕಾಲ ಪ್ರದರ್ಶನಗೊಳ್ಳುತ್ತದೆ.